‘ನಾನೂ ನಗರದ ನಕ್ಸಲ್​’ ಎಂದ ಗಿರೀಶ್​ ಕಾರ್ನಾಡ್​ ವಿರುದ್ಧ ದೂರು

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿರುದ್ಧ ವಕೀಲ ಅಮೃತೇಶ್ ನಗರದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗೌರಿ ಲಂಕೇಶ್ ಹತ್ಯೆ ನಡೆದು ಸೆಪ್ಟೆಂಬರ್ 5ಕ್ಕೆ 1 ವರ್ಷ ಆದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಗತಿಪರ ಚಿಂತಕರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಸಾಹಿತಿ ಗಿರೀಶ್ ಕಾರ್ನಾಡ್ “ನಾನೂ ನಗರದ ನಕ್ಸಲ್” ಎನ್ನುವ ಫಲಕವನ್ನು ಕೊರಳಿಗೆ ನೇತು ಹಾಕಿಕೊಂಡಿದ್ದರು.

ನಕ್ಸಲ್ ಎಂಬುದು ನಿಷೇಧಿತ ಸಂಘಟನೆ. ಹಾಗಿದ್ದರೂ ಬಹಿರಂಗವಾಗಿ ನಾನೂ ನಕ್ಸಲ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂಬ ಕಾರಣಕ್ಕೆ ಗಿರೀಶ್ ಕಾರ್ನಾಡ್ ಅವರನ್ನು ಬಂಧಿಸಬೇಕು ಹಾಗೂ ಗೌರಿ ಲಂಕೇಶ್ ಕೇಸ್‌ನಲ್ಲಿ ಇವರ ಪಾತ್ರ ಏನು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ವಕೀಲ ಅಮೃತೇಶ್ ದೂರು ನೀಡಿದ್ದಾರೆ.

ನಕ್ಸಲ್ ನಿಷೇಧಿತ ಸಂಘಟನೆ ಅಲ್ಲ: ಕಾರ್ನಾಡ್
ಈ ಸಂಬಂಧ ದಿಗ್ವಿಜಯ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಗಿರೀಶ್ ಕಾರ್ನಾಡ್ ನಕ್ಸಲ್ ನಿಷೇಧಿತ ಎನ್ನುವುದು ಎಲ್ಲೂ ಇಲ್ಲ. ಡೆಮಾಕ್ರೆಟಿಕ್ ವ್ಯವಸ್ಥೆಯಲ್ಲಿ ನಾನು ಮಾತನಾಡಿದ್ದೇನೆ ಎಂದಿದ್ದಾರೆ.

ಇನ್ನೂ ಅಮೃತೇಶ್ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಕೆಲವು ಹಿಂದೂಪರ ಸಂಘಟನೆಗಳು ನಗರ ಪೊಲೀಸ್ ಆಯುಕ್ತರ ಕಚೇರಿಗೂ ತೆರಳಿ ಗಿರೀಶ್ ಕಾರ್ನಾಡ್ ವಿರುದ್ಧ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)