ಕಲಶೇಶ್ವರ ಸ್ವಾಮಿಗೆ ಅದ್ದೂರಿ ವಿವಾಹ

ಕಳಸ: ಮಲೆನಾಡಿನ ಪುಣ್ಯಕ್ಷೇತ್ರ, ದಕ್ಷಿಣ ಕಾಶಿ ಕಲಶೇಶ್ವರ ಸ್ವಾಮಿಗೆ ಸೋಮವಾರ ರಾತ್ರಿ 3 ಗಂಟೆಗೆ ಗಿರಿಜಾಂಬೆಯೊಂದಿಗೆ ಕಲ್ಯಾಣ ನೆರವೇರಿಸಲಾಯಿತು.

ಸೋಮವಾರ ಸಂಜೆ ಉಪಾಧಿವಂತರು ವಾದ್ಯ ಘೊಷಗಳೊಂದಿಗೆ ಅಕ್ಷತೆ ಕೊಟ್ಟು ಕಲ್ಯಾಣಕ್ಕೆ ಊರ ಜನರನ್ನು ಕರೆದರು. ರಾತ್ರಿ ಈಶ್ವರನ ಎದುರು ಉಂಗುರ ಉಡಿಗೆಗಳನ್ನು ಇಟ್ಟು ಪೂಜಿಸಿ ಪಲ್ಲಕಿಯಲ್ಲಿ ಗಿರಿಜಾಂಬೆ ಬಳಿ ತರಲಾಯಿತು.

ಗಿರಿಜಾಂಬೆ ವಿಗ್ರಹ ಹಿಡಿದು ಹೂ ಹಿಂಗಾರದೊಂದಿಗೆ ದೀವಟಿಕೆ, ಪಂಚಪತಾಕಿ, ಕಟ್ಟಿಗೆ, ಚೌರಿ, ಮಂಗಳ ವಾದ್ಯಗಳೊಂದಿಗೆ ಗಿರಿಜಾಂಬೆ ದಿಬ್ಬಣವನ್ನು ಕಲಶೇಶ್ವರ ದೇವಸ್ಥಾನಕ್ಕೆ ಕರೆತರಲಾಯಿತು. ಸರ್ವಾಂಗ ಸುಂದರಿ ಅಮ್ಮನವರ ಬಳಿ ಬಂದಾಗ ಶಿವನ ಕಡೆಯವರು ದಿಬ್ಬಣವನ್ನು ಎದುರುಗೊಂಡರು. ಗಿರಿಜಾಂಬೆಯು ಮಂಟಪಕ್ಕೆ ಬಂದ ಕೂಡಲೇ ತಂತ್ರಿಗಳಿಂದ ನಾಂದಿ, ಪುಣ್ಯಾಹಗಳು ನಡೆದವು.

ಮಧುಪರ್ಕ ಪೂಜೆ, ಧ್ಯಾನವಾಹನ ಪೂಜೆ ನಡೆದು ಕನ್ಯಾವರಣ ಮಾಡಿದ ನಂತರ ಮಂಗಳಾಷ್ಟಕವಾಯಿತು. ಎಡನಾಡಿಯ ಬಾಗಿಲಿಗೆ ತೆರೆಹಿಡಿದು ಗಿರಿಜಾಂಬೆಯ ಅಡಿಗಳು ಗಿರಿಜಾಂಬ ದೇವಿ ವಿಗ್ರಹವನ್ನು ಕಲಶೇಶ್ವರನ ಬಲಭಾಗದಲ್ಲಿಟ್ಟು ಧಾರೆ ಎರೆಯುವ ಕಾರ್ಯಕ್ರಮ ನಡೆದು ಕಂಕಣ ಸಮರ್ಪಣೆಯಾಗಿ ಮಂಗಲ ನೀರಾಜನ, ಸಭಾಪೂಜೆ, ತಾಂಬೂಲ ಪ್ರದಾನ, ಭೂತ ಬಲಿ ಮಹೋತ್ಸವ ನಡೆಯಿತು. ನಂತರ ನೂತನ ದಂಪತಿಯ ದರ್ಶನ ನಡೆಯಿತು.

ಕಲ್ಯಾಣದ ಅಂಗವಾಗಿ ದೇವಾಲಯವನ್ನು ಸುಂದರವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ತಾಲೂಕು ಖಜಾನೆಯಲ್ಲಿರುವ ದೇವರ ಆಭರಣಗಳನ್ನು ತಂದು ದೇವರಿಗೆ ತೊಡಿಸಿ ಶಾಸ್ತ್ರಬದ್ಧವಾಗಿ ಕಲಶೇಶ್ವರನಿಗೆ ಕಲ್ಯಾಣ ನಡೆಸಲಾಯಿತು. ಕಳಸ ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.