ಗಿರ ಗಿರ ಗಿರ್​ಗಿಟ್ಲೆ

|ಮಂಜು ಕೊಟಗುಣಸಿ

ಬೆಂಗಳೂರು: ಎಲ್ಲರೂ ಮಾಡುವ ಸಹಜ ತಪ್ಪೊಂದನ್ನು ಆಯ್ದುಕೊಂಡು, ಅದಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರಂತೆ ರವಿಕಿರಣ್. ‘ಗಿರ್​ಗಿಟ್ಲೆ’ ಸಿನಿಮಾ ನೋಡುತ್ತಿದ್ದರೆ, ಇದು ನನ್ನದೇ ಕಥೆ. ನನ್ನ ಸುತ್ತಲಿನದ್ದೇ ಪರಿಸರ, ಅಲ್ಲಿರುವವರು ನನ್ನವರು, ಅಂಥ ತಪು್ಪ ನಾನು ಮಾಡಬಾರದಿತ್ತು ಎಂಬ ಪಾಪಪ್ರಜ್ಞೆ ಎಲ್ಲರಿಗೂ ಕಾಡುತ್ತದೆಯಂತೆ! ಹೀಗಂತ ತಮ್ಮ ಸಿನಿಮಾದ ಬಗ್ಗೆ ಹೇಳಿಕೊಂಡಿದೆ ‘ಗಿರ್​ಗಿಟ್ಲೆ’ ಬಳಗ. ಈ ಚಿತ್ರ ಇಂದು (ಮಾರ್ಚ್ 15) ತೆರೆಗೆ ಬರುತ್ತಿದೆ.

ಸಣ್ಣ ಸಣ್ಣ ತಪ್ಪಿನಿಂದ ದೊಡ್ಡ ತಲೆಗಳೇ ಉರುಳುತ್ತವೆ. ಸಣ್ಣ ವಿಷಯ ಎಂದು ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಅಂಥ ಸಣ್ಣ ತಪ್ಪೊಂದನ್ನು ಆಯ್ದುಕೊಂಡು ಇಡೀ ದೇಶದ ನಾಗರಿಕರನ್ನು ‘ಗಿರ್​ಗಿಟ್ಲೆ’ ಚಿತ್ರದ ಮೂಲಕ ಎಚ್ಚರಿಸಲು ಹೊರಟಿದ್ದಾರೆ ನಿರ್ದೇಶಕ ರವಿಕಿರಣ್. ಹಾಗಾದರೆ ಆ ತಪು್ಪ ಯಾವುದು? ಅದನ್ನು ಸಿನಿಮಾದಲ್ಲಿಯೇ ಎಳೆ ಎಳೆಯಾಗಿ ತೋರಿಸುತ್ತಾರಂತೆ. ‘ದೇಶದಲ್ಲಿ ವಾರಕ್ಕೆ ಒಮ್ಮೆಯಾದರೂ ಆ ತಪು್ಪ ಎಲ್ಲರಿಂದ ಪುನರಾವರ್ತನೆ ಆಗುತ್ತದೆ. ಅದು ಸಣ್ಣ ತಪ್ಪೆನಿಸಿದರೂ, ಅದರಿಂದ ಆಗುವ ಅನಾಹುತ ಸಣ್ಣದೇನಲ್ಲ! ಅದೆಲ್ಲವನ್ನೂ ‘ಗಿರ್​ಗಿಟ್ಲೆ’ ಸಿನಿಮಾದಲ್ಲಿ ಹೇಳಿದ್ದೇವೆ’ ಎಂಬುದು ರವಿಕಿರಣ್ ಮಾತು.

ಎಲ್ಲವೂ ಪ್ರೇಕ್ಷಕರಿಗೆ ಬಿಟ್ಟಿದ್ದು: ‘ಗಿರ್​ಗಿಟ್ಲೆ’ ಚಿತ್ರದಲ್ಲಿ ನಿರ್ದೇಶಕರು ಆಯ್ದುಕೊಂಡ ವಿಷಯ ಪೂರ್ತಿ ನೋಡುಗರ ಮನಸ್ಥಿತಿಗೆ ಬಿಟ್ಟಿದ್ದಂತೆ. ತೆರೆಮೇಲೆ ಕಾಣಿಸುವ ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದಕ್ಕೆ ಅನುಗುಣವಾಗಿ ಅವರಿಗೆ ಅದು ಅನ್ವಯಿಸುತ್ತದೆಯಂತೆ. ‘ಚಿತ್ರದ ಆಳಕ್ಕಿಳಿದು ನೋಡಿದರೆ, ಅಧ್ಯಾತ್ಮ ಅಂತ ಅನಿಸಬಹುದು. ಯಾವುದನ್ನೂ ವಿಚಾರ ಮಾಡದೆ, ಕೆಲಹೊತ್ತು ಮನರಂಜನೆಗಾಗಿ ಬಂದಿದ್ದೇನೆ ಅಂತಾದರೆ, ಚಿತ್ರದಲ್ಲಿನ ಕಮರ್ಷಿಯಲ್ ಅಂಶಗಳು ಇಷ್ಟವಾಗಬಹುದು. ಒಂದು ಸಲ ನಮ್ಮ ಸಿನಿಮಾ ನೋಡಿದರೆ, ಆ ಅಮಲು ಮತ್ತೊಮ್ಮೆ ತಾನೇ ಚಿತ್ರಮಂದಿರದತ್ತ ಕರೆದುಕೊಂಡು ಬರುತ್ತದೆ! ಅಂಥ ಚಿತ್ರ ಮಾಡಿದ್ದೇವೆ’ ಎಂಬ ಆಶಾಭಾವನೆ ನಿರ್ದೇಶಕರದ್ದು.

ತೆರೆಮೇಲೆ ಸಾಗಲಿದೆ ನೋಡುಗನ ಜೀವನ: ‘ನೋಡುಗನಿಗೆ ನಾವು ಹೇಳಹೊರಟಿರುವ ಕಥೆ ಕನೆಕ್ಟ್ ಆಗಿ, ಅದನ್ನು ಆತ ಅರ್ಥ ಮಾಡಿಕೊಂಡರೆ ನಮ್ಮ ಶ್ರಮ ಸಾರ್ಥಕ’ ಎನ್ನುವ ರವಿಕಿರಣ್, ಸಿನಿಮಾ ನೋಡಿದ ಮೇಲೆ ಬೇರಾರದೋ ಕಥೆ ನೋಡಿದ ಭಾವ ಪ್ರೇಕ್ಷಕನಿಗೆ ಕಾಡುವುದಿಲ್ಲ ಎನ್ನುತ್ತಾರೆ. ರಂಗಾಯಣ ರಘು ಸೇರಿ ಪ್ರತಿ ಪಾತ್ರಗಳಲ್ಲಿ ತನ್ನದೂ ಒಂದು ಪಾತ್ರವಿದೆ ಎಂದು ಪ್ರತಿಯೊಬ್ಬ ನೋಡುಗ ಭಾವಿಸಿಕೊಳ್ಳುತ್ತಾನಂತೆ. ಇದು ನನ್ನದೇ ಕಥೆ. ಇದು ನನ್ನ ಸುತ್ತಲಿನ ಪರಿಸರ, ಇವರು ನನ್ನವರು, ನಾನಿಂಥ ತಪು್ಪ ಮಾಡಬಾರದಿತ್ತು ಹೀಗೆ ಅಂದುಕೊಳ್ಳುತ್ತಾನೆ. ಪ್ರತಿಯೊಬ್ಬರನ್ನು ಯೋಚನೆಯ ಆಳಕ್ಕೆ ಇಳಿಸುತ್ತದೆ. ಮನಸ್ಸಿಗೆ ತಟ್ಟುವ ಅಂಶಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಬೆರೆಸಿದ್ದಾರಂತೆ.

ಕಿರುತೆರೆಗೂ ಸೈ ಬೆಳ್ಳಿತೆರೆಗೂ ಜೈ: ಕಿರುತೆರೆಯಿಂದ ಬಂದು ಸಿನಿಮಾಗಳಲ್ಲಿ ಬಿಜಿಯಾಗಿಬಿಟ್ಟರೆ, ಮತ್ತೆ ಧಾರಾವಾಹಿಯತ್ತ ಮುಖ ಮಾಡುವ ಕಲಾವಿದರ ಸಂಖ್ಯೆ ಕಮ್ಮಿ. ಆದರೆ, ವೈಷ್ಣವಿ ಮಾತ್ರ ಹಾಗಲ್ಲವಂತೆ. ಸಿನಿಮಾ ಅವಕಾಶ ಸಿಕ್ಕರೆ ಸಿನಿಮಾ ಮಾಡುತ್ತ, ಇಲ್ಲವಾದರೆ ಧಾರಾವಾಹಿಯಲ್ಲೇ ಮುಂದುವರಿಯುತ್ತಾರಂತೆ.

ಬೆಳ್ಳಿತೆರೆಗಿಂತ ಕಿರುತೆರೆಯಲ್ಲಿಯೇ ಹೆಚ್ಚು ಖ್ಯಾತಿ ಸಿಗುತ್ತದೆ. ಒಂದಿಡಿ ಕುಟುಂಬಕ್ಕೆ ನಾವು ಹತ್ತಿರವಾಗುತ್ತೇವೆ. ನಿತ್ಯ ಅವರ ಮನೆಗೆ ಹೋಗುತ್ತೇವೆ. ಈ ಥರದ ವಾತಾವರಣ ಬೆಳ್ಳಿತೆರೆಯಲ್ಲಿ ಸಾಧ್ಯವಿಲ್ಲ. ಹಾಗಾಗಿ ನನ್ನ ಮೊದಲ ಪ್ರಾಶಸ್ಱ ಏನಿದ್ದರೂ ಧಾರಾವಾಹಿಗೆ. ಒಳ್ಳೆಯ ಸಿನಿಮಾ ಸಿಕ್ಕರೆ ಮಾತ್ರ ನಟಿಸುತ್ತೇನೆ. ಪಾತ್ರಗಳ ವಿಚಾರದಲ್ಲಿ ಇಂಥದ್ದೇ ಮಾಡಬೇಕೆಂಬ ಆಸೆ ಇಲ್ಲ. ಎಲ್ಲ ತರಹದ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳಬೇಕು’ ಎಂದು ಕಿರುತೆರೆ ಮತ್ತು ಬೆಳ್ಳಿತೆರೆ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ ವೈಷ್ಣವಿ.

ಗಿರ್​ಗಿಟ್ಲೆಯಲ್ಲಿ ಉಪ್ಪಿ ಸ್ಟೈಲ್: ನಿರ್ದೇಶಕ ರವಿಕಿರಣ್ ಚಿಕ್ಕಂದಿನಿಂದಲೂ ಉಪೇಂದ್ರ ಅವರ ಅಪ್ಪಟ ಅಭಿಮಾನಿ. ಶಾಲಾದಿನಗಳಲ್ಲಿ ರಜೆ ಸಿಕ್ಕಾಗಲೆಲ್ಲ ಉಪ್ಪಿ ಮನೆ ಮುಂದೆಯೇ ಇರುತ್ತಿದ್ದರಂತೆ. ಸ್ವತಃ ಉಪ್ಪಿ ಕಡೆಯಿಂದಲೇ ಬೈಸಿಕೊಂಡಿದ್ದು ಉಂಟು. ಸಿನಿಮಾ ಶೂಟಿಂಗ್ ಸೆಟ್​ಗೆ ತೆರಳಿ ಚಿತ್ರೀಕರಣ ನೋಡುತ್ತ ಕೂರುತ್ತಿದ್ದರಂತೆ ರವಿ. ಬಳಿಕ ಚಿತ್ರವನ್ನೇ ವೃತ್ತಿಯಾಗಿಸಿಕೊಂಡು, ಚೆನ್ನೈನಲ್ಲಿ ಕೆಲ ಕಾಲ ಸಿನಿಮಾ ಬಗ್ಗೆ ತಿಳಿದುಕೊಂಡರು. ‘ಸೂಪರ್’, ‘ಸಪ್ನೋಂಕಿ ರಾಣಿ’, ‘ಜಾಕ್ಸನ್’ ಸಿನಿಮಾಗಳಲ್ಲಿ ಕೆಲಸ ಮಾಡಿದರು. ಇದೀಗ ಉಪ್ಪಿ ಸ್ಟೈಲ್​ನಲ್ಲಿಯೇ ‘ಗಿರ್​ಗಟ್ಲೆ’ ಚಿತ್ರ ಮಾಡಿದ್ದಾರೆ.

ಶ್ರೀರಾಂಪುರ ರೌಡಿಸಂ ಎಳೆ!

90ರ ದಶಕದಲ್ಲಿ ಬೆಂಗಳೂರಿನ ಶ್ರೀರಾಂಪುರ ರೌಡಿಸಂ ಹೇಗಿತ್ತು? ಆ ಏರಿಯಾದವರು ಎಂದಾಗ ಜನರಲ್ಲಿ ಮೂಡುತ್ತಿದ್ದ ಆತಂಕ ಎಂಥದ್ದು? ಈ ಅಂಶಗಳನ್ನಿಟ್ಟುಕೊಂಡು ಸಿನಿಮಾ ತೆರೆದುಕೊಳ್ಳುತ್ತದೆ. ಅದಕ್ಕೆ ಪೂರಕವೆಂಬಂತೆ ಟ್ರೇಲರ್​ನ ಶೇ. 70 ಭಾಗ ರೌಡಿಸಂ ಹಿನ್ನೆಲೆಯಲ್ಲಿಯೇ ಸಾಗುತ್ತದೆ. ‘ಗಿರ್​ಗಿಟ್ಲೆ’ ಚಿತ್ರ ಆರಂಭವಾಗುವುದೇ ಶ್ರೀರಾಂಪುರದ ಗಲ್ಲಿಯಿಂದ. ಅಲ್ಲಿ ಮಚ್ಚು, ಕತ್ತಿ ಝುಳಪಿಸಿವೆ. ಗನ್​ಗಳಿಂದ ಬುಲೆಟ್​ಗಳು ಸಿಡಿದಿವೆ. ಭೂಗತ ಲೋಕಕ್ಕೆ ಕಾಲಿಡುವ ಎಳೆಯ ಹುಡುಗರ ಮನಸ್ಥಿತಿಯನ್ನೂ ಸಿನಿಮಾದಲ್ಲಿ ತೋರಿಸಿದ್ದಾರಂತೆ ನಿರ್ದೇಶಕರು.

ಅಗ್ನಿಸಾಕ್ಷಿ ವೈಷ್ಣವಿಗಿದು ಚೊಚ್ಚಲ ಸಿನಿಮಾ

ಕಿರುತೆರೆಯಲ್ಲಿ ಹೆಂಗಳೆಯರ ಮನಗೆದ್ದ ‘ಅಗ್ನಿಸಾಕ್ಷಿ’ ಖ್ಯಾತಿಯ ವೈಷ್ಣವಿ, ಮೊದಲ ಬಾರಿಗೆ ‘ಗಿರ್​ಗಿಟ್ಲೆ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಚಿತ್ರದಲ್ಲಿ ಅವರದ್ದು ವಿನ್ಯಾಸಕಿ ಪಾತ್ರ. ತೆರೆಮೇಲೆ ಕಡಿಮೆ ಹೊತ್ತು ಕಾಣಿಸಿಕೊಂಡರೂ, ಮಹತ್ವದ ಪಾತ್ರವೇ ಅವರಿಗೆ ಸಿಕ್ಕಿದೆಯಂತೆ. ‘ಒಂದು ಚಿಕ್ಕ ಮಗು ಹುಟ್ಟಿದಾಗ ಹೇಗೆ ಕಣ್ಣು ಬಿಡುತ್ತೋ, ಆ ಮನಸ್ಥಿತಿಯಲ್ಲಿ ನಾನಿದ್ದೇನೆ. ಮೊದಲ ಚಿತ್ರದಲ್ಲಿ ಬರೀ 15 ನಿಮಿಷ ನಾನು ಕಾಣಿಸುತ್ತೇನೆ. ಹಾಗಿದ್ದರೂ ಚಿತ್ರದ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ’ ಎನ್ನುತ್ತಾರೆ ವೈಷ್ಣವಿ.