ವಿಶ್ವಸಂಸ್ಥೆಯಲ್ಲಿ ಪಾಕ್​ಗೆ ಮತ್ತೆ ಹಿನ್ನಡೆ; ಗಿಲ್ಗಿಟ್​-ಬಾಲ್ಟಿಸ್ತಾನ ಭಾರತದ ಭಾಗ ಎಂದ ಪಿಒಕೆ ಹೋರಾಟಗಾರ

ಜಿನೀವಾ: ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯನ್ನು ಬಯಸಿದ್ದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ. ಪಾಕ್​ ವಶದಲ್ಲಿರುವ ಗಿಲ್ಗಿಟ್​ ಬಾಲ್ಟಿಸ್ತಾನ ಪ್ರದೇಶ ಭಾರತಕ್ಕೆ ಸೇರಿದ್ದು ಎಂದು ಪಾಕ್​ ಆಕ್ರಮಿತ ಕಾಶ್ಮೀರದ ಹೋರಾಟಗಾರ ವಿಶ್ವಸಂಸ್ಥೆಯಲ್ಲಿ ತಿಳಿಸಿದ್ದಾರೆ.

ಜಿನೆವಾದಲ್ಲಿ ಬುಧವಾರ ನಡೆದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ 42ನೇ ಸಮಾವೇಶದಲ್ಲಿ ಮಾತನಾಡಿದ ಗಿಲ್ಗಿಟ್​-ಬಾಲ್ಟಿಸ್ತಾನದ ಹೋರಾಟಗಾರ ಮತ್ತು ಅಮೆರಿಕದ ವಾಷಿಂಗ್ಟನ್​ನಲ್ಲಿರುವ ಗಿಲ್ಗಿಟ್​ ಬಾಲ್ಟಿಸ್ತಾನ ಅಧ್ಯಯನ ಕೇಂದ್ರದ ನಿರ್ದೇಶಕ ಸೆಂಗೆ ಎಚ್​ ಸೆರಿಂಗ್​ ಭಾರತದ ಪರ ಬ್ಯಾಟ್​ ಬೀಸಿದರು. ‘ಗಿಲ್ಗಿಟ್​-ಬಾಲ್ಟಿಸ್ತಾನ ಭಾರತದ ಒಂದು ಭಾಗ. ಕಳೆದ 70 ವರ್ಷಗಳಿಂದ ಗಿಲ್ಗಿಟ್​ ಬಾಲ್ಟಿಸ್ತಾನದ ಅಭಿವೃದ್ಧಿಗೆ ಪಾಕಿಸ್ತಾನ ಬಹುದೊಡ್ಡ ಅಡ್ಡಿಯಾಗಿದೆ ಎಂಬುದನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಗಮನಿಸಬೇಕು ಎಂದು ತಿಳಿಸಿದರು.

ಗಿಲ್ಗಿಟ್​-ಬಾಲ್ಟಿಸ್ತಾನ ಮತ್ತು ಕಾಶ್ಮೀರಿ ಜನರೊಂದಿಗೆ ನಾವಿದ್ದೇವೆ ಎಂದು ಪಾಕಿಸ್ತಾನ ಸುಳ್ಳು ಭರವಸೆ ನೀಡುತ್ತಿದೆ. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ಮತ್ತು ಇಡೀ ವಿಶ್ವಕ್ಕೆ ಪಾಕಿಸ್ತಾನ ಇಲ್ಲಿನ ಜನರ ಮೇಲೆ ಎಸಗುತ್ತಿರುವ ದೌರ್ಜನ್ಯ ಮತ್ತು ತನ್ನ ಲಾಭಕ್ಕಾಗಿ ಅವರನ್ನು ಬಳಕೆ ಮಾಡಿಕೊಳ್ಳುತ್ತಿರುವುದರ ಅರಿವಿದೆ ಎಂದು ತಿಳಿಸಿದರು.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರೆಸ್​ ಸಹ ಜಮ್ಮು ಮತ್ತು ಕಾಶ್ಮೀರ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇದು ಅವರ ಆಂತರಿಕ ವಿಚಾರ ಎಂದು ತಿಳಿಸಿದ್ದರು.

1949ರಲ್ಲಿ ಕರಾಚಿ ಒಪ್ಪಂದದ ಅನ್ವಯ ಪಾಕ್​ ಆಕ್ರಮಿತ ಕಾಶ್ಮೀರದಿಂದ ಗಿಲ್ಗಿಟ್​​-ಬಾಲ್ಟಿಸ್ತಾನ ಪ್ರದೇಶವನ್ನು ಪ್ರತ್ಯೇಕಿಸಲಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *