ನಾವೆಲ್ಲರೂ ಒಂದಲ್ಲಾ ಒಂದು ಬಾರಿ ಇನ್ನೊಬ್ಬರಿಗೆ ಉಡುಗೊರೆಯನ್ನು ನೀಡಿರುತ್ತೇವೆ. ಹಾಗೆಯೇ ಸ್ವೀಕರಿಸಿರುತ್ತೇವೆ ಕೂಡ. ಯಾವುದೇ ನಿರೀಕ್ಷೆ ಇಲ್ಲದೆ ಪ್ರೀತಿಪಾತ್ರರಿಗೆ ನೀಡುವ ಉಡುಗೊರೆ ಏನು ಬೇಕಾದರೂ ಆಗಿರಬಹುದು.
ಪೆನ್ನು, ಪುಸ್ತಕ, ಆಟಿಕೆ ಗೊಂಬೆಯಿಂದ ಹಿಡಿದು ಬೈಕ್, ಕಾರು, ಚಿನ್ನದ ಸರ, ಫ್ಲಾ್ಯಟ್ ಹೀಗೆ ಎಷ್ಟೇ ಬೆಲೆಬಾಳುವ ವಸ್ತುವೂ ಆಗಿರಬಹುದು. ಇಂತಹ ವಸ್ತುವನ್ನೇ ಉಡುಗೊರೆ ನೀಡಬೇಕು ಎಂದೇನಿಲ್ಲ. ಅವರವರ ಇಷ್ಟ, ಅನುಕೂಲಕ್ಕೆ ತಕ್ಕಂತೆ ಉಡುಗೊರೆಯನ್ನು ನೀಡಲಾಗುತ್ತದೆ. ಉಡುಗೊರೆ ನೀಡಲು ಅಥವಾ ಪಡೆದುಕೊಳ್ಳಲು ಸಾಕಷ್ಟು ವಸ್ತುಗಳೂ, ಕಾರಣಗಳೂ ಇವೆ. ಹುಟ್ಟುಹಬ್ಬ, ಮದುವೆ, ಉಪನಯನ, ಗೃಹ ಪ್ರವೇಶ, ವಿವಾಹ ವಾರ್ಷಿಕೋತ್ಸವ, ಹಬ್ಬ-ಹರಿದಿನಗಳು ಹೀಗೆ ಅನೇಕ ಸಂದರ್ಭಗಳಲ್ಲಿ ಉಡುಗೊರೆಗಳು ವಿನಿಮಯವಾಗುತ್ತವೆ.
ಈ ಉಡುಗೊರೆ ನೀಡುವ ಆಚರಣೆ ಯಾವಾಗ ಎಲ್ಲಿ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಪುರಾಣದಲ್ಲೂ ಈ ಉಡುಗೊರೆ ಸಂಸ್ಕೃತಿಯನ್ನು ಕಾಣಬಹುದು. ರಾಜ್ಯ, ಯುದ್ಧವನ್ನು ಗೆಲ್ಲಲು ಸಹಕರಿಸಿದ ಸೇನಾನಿ, ಮಂತ್ರಿ, ಭಟರಿಗೆಲ್ಲ ಚಿನ್ನದ ನಾಣ್ಯ, ಭೂಮಿಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಸಾಕಷ್ಟು ಕತೆಗಳಿವೆ. ಜೊತೆಗೆ ಆಸ್ಥಾನದಲ್ಲಿ ಪ್ರತಿಭೆ, ಜಾಣ್ಮೆ, ಕೌಶಲ ಇತ್ಯಾದಿಯನ್ನು ಪ್ರದರ್ಶಿಸುವವರಿಗೆ ರಾಜ-ರಾಣಿಯರು ಕಂಠೀಹಾರವನ್ನೋ, ಮುತ್ತಿನ ಸರ, ಬಂಗಾರದ ನಾಣ್ಯ ಹೀಗೆ ಏನಾದರೊಂದನ್ನು ಉಡುಗೊರೆಯಾಗಿ ನೀಡುತ್ತಿದ್ದುದನ್ನು ಓದಿಯೋ, ಕೇಳಿಯೋ ತಿಳಿದಿದ್ದೇವೆ.
ಉಡುಗೊರೆ ಅದೆಷ್ಟೇ ಬೆಲೆ ಬಾಳುವುದೇ ಆಗಿರಲಿ ಅಥವಾ ಸಾಮಾನ್ಯ ವಸ್ತುವೇ ಆಗಿರಲಿ ಅದು ಕೊಡುವವರ ಪ್ರೀತಿ, ಗೌರವ, ಅಭಿಮಾನ ಮತ್ತು ಪಡೆಯುವವರ ರೀತಿ, ನಂಬಿಕೆ, ವಿಶ್ವಾಸದ ಮೂಲಕ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆ. ಸ್ನೇಹಿತರು, ಆಪ್ತರಿಗೆ ನೀಡುವ ಉಡುಗೊರೆಯು ಸಂಬಂಧಗಳನ್ನು ಬೆಸೆಯುವ ಸೇತುವೆಯಂತೆ. ಪರಸ್ಪರ ಭಾವನಾತ್ಮಕ ಸಂಬಂಧವನ್ನು ಆತ್ಮೀಯತೆಯನ್ನು ವೃದ್ಧಿಸುತ್ತದೆ. ಹಬ್ಬ ಹರಿದಿನಗಳಲ್ಲಿ ನೀಡುವ ಉಡುಗೊರೆಯು ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.
ಹಿಂದಿನ ಕಾಲದಲ್ಲಿ ದೇಶದೆಲ್ಲೆಡೆ ಆರ್ಥಿಕ ಸಂಕಷ್ಟವಿದ್ದಾಗ ಜನರು ಬಡತನದಿಂದ ಇದ್ದರು. ಆಗ ಅವರಿಗೆ ಮನೆಗೆ ಬೇಕಾಗುವ ಮೂಲಭೂತ ವಸ್ತುಗಳು, ಗೃಹ ಉಪಯೋಗಿ ವಸ್ತುಗಳನ್ನು ಉಡುಗೊರೆ ನೀಡಲಾಗುತ್ತಿತ್ತು. ಹೆಚ್ಚಾಗಿ ಸ್ವಾಭಿಮಾನಿಗಳಾಗಿದ್ದ ಜನರು ಇತರರಿಂದ ಯಾವ ಸಹಾಯವನ್ನೂ ಪಡೆಯಲು ಮುಂದಾಗುತ್ತಿರಲಿಲ್ಲ. ಆಗ ಆರ್ಥಿಕ ಸಹಾಯದ ಬದಲಾಗಿ ಕೆಲವು ಸಂದರ್ಭಗಳಲ್ಲಿ ಉಡುಗೊರೆಗಳನ್ನು ನೀಡುವ ಮೂಲಕ ಜನರ ಜೀವನಾವಶ್ಯಕತೆಯನ್ನು ಪೂರೈಸಲಾಗುತ್ತಿತ್ತು. ಈಗ ಹಾಗಿಲ್ಲ. ಜನರ ಜೀವನಮಟ್ಟ ಸುಧಾರಿಸಿದೆ. ಉಡುಗೊರೆ ಸಂಪ್ರದಾಯವು ಮುಂದುವರಿದ್ದು ಹೊಸ ಹೊಸ ಆಯಾಮಗಳನ್ನು ಪಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬ ಆಚರಣೆಗಳು ಹೆಚ್ಚಾಗಿವೆ. ಬಹಳಷ್ಟು ಮಕ್ಕಳು ತಮಗೆ ಇಂತಹದ್ದೇ ಉಡುಗೊರೆ ಬೇಕೆಂದು ಹಠ ಹಿಡಿಯುತ್ತಾರೆ. ತಮ್ಮ ಮುದ್ದು ಮಕ್ಕಳ ಹಠಕ್ಕೆ ಸೋಲುವ ಹೆತ್ತವರು ಕಷ್ಟವಾದರೂ ಅವರ ಆಸೆಯನ್ನು ಪೂರೈಸುತ್ತಾರೆ. ಶಾಲೆಯಲ್ಲಿ ತಮ್ಮ ನೆಚ್ಚಿನ ಟೀಚರ್ನ ಹುಟ್ಟು ಹಬ್ಬವಿದ್ದರೆ ಮಕ್ಕಳು ಅದೆಷ್ಟು ತಯಾರಿ ನಡೆಸುತ್ತಾರೆ ಎಂದು ಟೀಚರ್ಗಳ ಬಾಯಲ್ಲೇ ಕೇಳಬೇಕು. ಕೆಲವು ಮಕ್ಕಳು ಗುಲಾಬಿ ನೀಡಿದರೆ ಇನ್ನು ಕೆಲವು ಮಕ್ಕಳು ಪೆನ್ನು ಪೆನ್ಸಿಲ್ ನೀಡಿ ವಿಶ್ ಮಾಡುತ್ತಾರೆ. ಇನ್ನು ಕೆಲವು ಮಕ್ಕಳು ರಾತ್ರಿಯಿಡೀ ಕೂತು ಡ್ರಾಯಿಂಗ್ ಶೀಟ್ನಲ್ಲಿ ಟೀಚರ್ ಚಿತ್ರ ಬಿಡಿಸಿ ತಂದು ನೀಡುವವರೂ ಇದ್ದಾರೆ.
ನನ್ನ ಹುಟ್ಟುಹಬ್ಬಕ್ಕೆ ಮೊಮ್ಮಗಳು ಮಾನ್ಯ ತಾನೇ ಬಿಡಿಸಿದ ಚಿತ್ರಗಳನ್ನು ನನಗೆ ಉಡುಗೊರೆಯಾಗಿ ನೀಡುತ್ತಿದ್ದಳು. ನಾವು ಪ್ರತಿ ಬಾರಿ ವಿದೇಶಕ್ಕೆ ಹೋದಾಗಲೂ ಉಡುಗೊರೆಗೆ ಅಂತ ಏನಾದರೂ ಖರೀದಿ ಮಾಡುತ್ತೇವೆ. ತಂದೆ-ತಾಯಿಯನ್ನು ಕಾಡಿಸಿ, ಪೀಡಿಸಿ ನೆಚ್ಚಿನ ಟೀಚರ್ಗೆ ಪ್ರೀತಿಯಿಂದ ಉಡುಗೊರೆ ಕೊಡಲು ಎಲ್ಲ ಮಕ್ಕಳು ತುದಿಗಾಲಲ್ಲಿ ನಿಲ್ಲುತ್ತಾರಂತೆ. ಅವರು ಕೊಡುವ ಉಡುಗೊರೆಗಳಿಗಿಂತ ಅವರು ತೋರುವ ಮುಗ್ಧ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಟೀಚರ್ ಒಬ್ಬರು ಮಕ್ಕಳ ಪ್ರೀತಿಯನ್ನು ವರ್ಣಿಸುತ್ತಾರೆ. ಇಂದಿನ ದಿನಗಳಲ್ಲಿ ಉಡುಗೊರೆ ನೀಡಲು ಕಷ್ಟಪಡಬೇಕಾಗಿಲ್ಲ. ಅಂಗಡಿಗಳಿಗೆ ಹೋದರೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ ಪ್ಯಾಕ್ ಮಾಡಿ ಉಡುಗೊರೆ ನೀಡಬಹುದು.
ಆದರೆ ಅದಕ್ಕಿಂತ ಹೆಚ್ಚು ಇಷ್ಟವಾಗುವುದೆಂದರೆ ಸ್ವತಃ ತಾನೇ ಕೈಯಾರೆ ಬಿಡಿಸಿದ ಚಿತ್ರವೋ, ಕಲಾಕೃತಿಯೋ, ತಯಾರಿಸಿದ ಕರಕುಶಲ ವಸ್ತುವೋ ಹೀಗೆ ಏನಾದರೊಂದನ್ನು ಉಡುಗೊರೆ ನೀಡಿದಾಗ ಪಡೆದವರಿಗೂ, ಕೊಟ್ಟವರಿಗೂ ಆಗುವ ಸಂತೋಷ ಅಷ್ಟಿಷ್ಟಲ್ಲ. ಹಿಂದೆಲ್ಲ ಕೂಸು ಹುಟ್ಟುವ ಮೊದಲೇ ತಾಯಂದಿರು ಮಕ್ಕಳಿಗಾಗಿ ಉಲ್ಲನ್ನಿಂದ ಟೊಪ್ಪಿ, ಕಾಲು ಚೀಲ, ಸ್ವೆಟರ್ಗಳನ್ನು ತಯಾರಿಸುತ್ತಿದ್ದರು. ಅಜ್ಜಿಯರು ತಮ್ಮ ಕಾಟನ್ ಸೀರೆಯನ್ನು ಉಪಯೋಗಿಸಿ ಮಕ್ಕಳಿಗೆ ಮಲಗಲು, ಹೊದೆಯಲು ಆಗುವಂತಹ ಬಟ್ಟೆಯನ್ನು ರೆಡಿ ಮಾಡಿ, ಅದರಲ್ಲಿ ಹೂವಿನ ಚಿತ್ತಾರ ಬಿಡಿಸುತ್ತಿದ್ದರು. ಅದನ್ನೇ ಮಕ್ಕಳಿಗೆ ಕೊಡುತ್ತಿದ್ದರು. ಮೊಮ್ಮಕ್ಕಳೂ ಅಷ್ಟೇ, ಇದು ನನ್ನ ಅಜ್ಜಿಯ ಸೀರೆ ಎನ್ನುತ್ತಾ ಆಪ್ಯಾಯಮಾನವಾದ ಪ್ರೀತಿ, ಭಾವನಾತ್ಮಕ ಸಂಬಂಧವನ್ನು ಹೊಂದುತ್ತಾರೆ. ಹೀಗೆ ಉಡುಗೊರೆಗಳನ್ನು ನೀಡುವಾಗ ತಾವೇ ತಯಾರಿಸಿದ ಕರಕುಶಲ ಅಥವಾ ಇತರ ವಸ್ತುಗಳನ್ನು ನೀಡುವ ಮೂಲಕ ಭಾವನಾತ್ಮಕವಾದ ಸಂಬಂಧ ಇನ್ನಷ್ಟು ಹೆಚ್ಚಾಗುತ್ತದೆ.
ಹುಟ್ಟುಹಬ್ಬ ಬಿಟ್ಟರೆ ಅತಿ ಹೆಚ್ಚು ಉಡುಗೊರೆಗಳು ದೊರೆಯುವುದು ಮದುವೆ ಮತ್ತು ಗೃಹಪ್ರವೇಶ ಸಮಾರಂಭಗಳಲ್ಲಿ. ಮದುವೆಯಲ್ಲಿ ಕೆಲವರು ಉಡುಗೊರೆಯ ಬದಲು ಕವರ್ನಲ್ಲಿ ಒಂದಿಷ್ಟು ಹಣ ಹಾಕಿ ಕೊಡುತ್ತಾರೆ. ಮದುವೆ ಖರ್ಚಿಗೂ ಆಗುತ್ತೆ ಇಲ್ಲಾಂದ್ರೆ ಆ ಹಣದಿಂದ ಅವರಿಗೆ ಇಷ್ಟವಾದುದನ್ನು ಕೊಂಡುಕೊಳ್ಳಬಹುದು ಎಂಬ ಭಾವನೆಯೂ ಇದರ ಹಿಂದಿರಬಹುದು. ಮದುವೆಯಾದ ಮೇಲೆ ಮನೆಯಲ್ಲಿ ಯಾರೆಲ್ಲ ಏನೇನು ಉಡುಗೊರೆ ಕೊಟ್ಟಿದ್ದಾರೆ ಎಂದು ಪ್ಯಾಕೆಟ್ಗಳನ್ನು ಬಿಚ್ಚಿ ನೋಡುವುದೇ ಒಂದು ಕಾರ್ಯಕ್ರಮವಾಗುತ್ತದೆ. ಅದರಲ್ಲೂ ಕೆಲವರು ತುಂಟತನ ಮಾಡಲು ದೊಡ್ಡ ರಟ್ಟಿನ ಬಾಕ್ಸಿನೊಳಗೆ ಏನೇನೋ ತುರುಕಿ ಸಭೆಯಲ್ಲಿ ನೀಡುವಾಗ ‘ಓಹೋ ಹುಡುಗನಿಗೆ ಆತನ ಗೆಳೆಯರು ಬಹಳ ದೊಡ್ಡ ಉಡುಗೊರೆಯನ್ನೇ ಕೊಟ್ಟಿದ್ದಾರೆ’ಎನಿಸುವುದು. ಅದನ್ನು ಬಿಚ್ಚಿ ನೋಡುವಾಗ ಮಾತ್ರ ಪೇಪರ್ ರಟ್ಟುಗಳ ಡಬ್ಬ ಮಾತ್ರ ದೊರೆತು ತಮಾಷೆ ನಡೆಯುವುದುಂಟು.
ಇನ್ನು ಗೃಹಪ್ರವೇಶಕ್ಕೆ ಹಿಂದೆಲ್ಲ ಹೆಚ್ಚಾಗಿ ಗೋಡೆ ಗಡಿಯಾರವನ್ನೇ ನೀಡುತ್ತಿದ್ದರು. ಒಂದೇ ಮನೆಯಲ್ಲಿ 8-10 ಗೋಡೆ ಗಡಿಯಾರಗಳನ್ನು ನೋಡಿ ಇವರಿಗೆ ಗಡಿಯಾರದ ಅಂಗಡಿ ಇದೆಯೇ ಎನ್ನಿಸುವುದೂ ಇದೆ. ಪಡೆದ ಉಡುಗೊರೆಗಳನ್ನು ಕಾಪಿಡಬೇಕಲ್ಲವೇ? ಹಾಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಗೋಡೆಗೆ ಮೊಳೆ ಹೊಡೆದು ತೂಗು ಹಾಕಿರುತ್ತಾರೆ. ಇನ್ನು ಕೆಲವರು ತಮ್ಮ ಜಾಣ್ಮೆಯನ್ನು ಉಪಯೋಗಿಸಿ ತಮಗೆ ಬಂದ ಉಡುಗೊರೆಗಳನ್ನು ಚಂದವಾಗಿ ಪ್ಯಾಕ್ ಮಾಡಿ ಬೇರೆ ಯಾರದದ್ದಾರೂ ಗೃಹಪ್ರವೇಶಕ್ಕೆ ಉಡುಗೊರೆ ಕೊಡುತ್ತಾರೆ. ಇದರಿಂದ ಉಡುಗೊರೆ ಕೊಳ್ಳುವ ಖರ್ಚೂ ಉಳಿಯಿತು, ಮನೆಯಲ್ಲಿದ್ದ ಹೆಚ್ಚುವರಿ ಉಡುಗೊರೆಯನ್ನೂ ದಾಟಿಸಿದಂತಾಗುವುದು. ಇದೀಗ ಹಾಗಿಲ್ಲ. ಉಡುಗೊರೆ ಕೊಡುವಾಗಲೇ ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ಯೋಚಿಸಿ ತೆಗೆದುಕೊಳ್ಳುತ್ತಾರೆ.
ಈಗೀಗ ಕಾರ್ಯಕ್ರಮಕ್ಕೆ ಆಗಮಿಸುವ ನೆಂಟರಿಷ್ಟರು, ಬಂಧು-ಬಳಗ, ಅತಿಥಿಗಳಿಗೂ ನೆನಪಿನ ಕಾಣಿಕೆಯನ್ನು ನೀಡುವ ಪರಿಪಾಠವನ್ನು ಕೆಲವು ಕಡೆಗಳಲ್ಲಿ ಕಾಣಬಹುದು. ಗೃಹಪ್ರವೇಶಕ್ಕೆ ಹೋದಾಗ ಸಿಹಿ ತಿಂಡಿಯ ಜೊತೆಗೆ ಸಣ್ಣ ಸ್ಟೀಲ್ ಡಬ್ಬ ಅಥವಾ ಬೇರೇನೋ ವಸ್ತುವನ್ನು ಮನೆಯವರು ಕೊಟ್ಟು ಬೀಳ್ಕೊಡುತ್ತಾರೆ. ಇನ್ನೂ ಕೆಲವರು ಹೂ ಗಿಡ ಅಥವಾ ಹಣ್ಣಿನ ಗಿಡಗಳನ್ನು ನೀಡಿ ಪರಿಸರ ಪ್ರೇಮವನ್ನು ಮೆರೆಯುತ್ತಾರೆ. ಉಡುಗೊರೆ ಕೊಟ್ಟಂತೆಯೂ ಆಗುತ್ತದೆ. ಜೊತೆಗೆ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದಂತೆಯೂ ಆಗುತ್ತದೆ.
ಹೂ, ಹಣ್ಣಿನ ಗಿಡಗಳನ್ನು ಪಡೆದಾಗ ಅದನ್ನು ನೆಟ್ಟು ಬೆಳೆಸಬಹುದು. ಪೆನ್ನು ಕೊಟ್ಟರೆ ಬರೆಯಲು ಉಪಯೋಗಿಸಬಹುದು, ಪಾತ್ರೆಗಳನ್ನು ಕೊಟ್ಟರೆ ಅಡುಗೆಗೆ ಬಳಸಿಕೊಳ್ಳಬಹುದು, ಅಲಂಕಾರಿಕ ವಸ್ತುಗಳನ್ನು ಪಡೆದಾಗ ಶೋಕೇಸ್ನಲ್ಲಿರಿಸಬಹುದು. ಹೀಗೆ ಪ್ರೀತಿ ಅಭಿಮಾನದಿಂದ ಕೊಡುವ ಉಡುಗೊರೆಯನ್ನು ಜತನದಿಂದ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಹೆಚ್ಚಾಗಿ ನಮ್ಮ ಕಾಲದವರು ಇದು ನಮ್ಮ ಮದುವೆಗೆ ಮಾವ ಕೊಟ್ಟಿದ್ದು, ಇದು ಅತ್ತೆ ಕೊಟ್ಟ ಸೀರೆ, ಇದು ಚಿಕ್ಕಪ್ಪ ಕೊಟ್ಟ ಪಾತ್ರೆ, ಚಿಕ್ಕಮ್ಮ ಕೊಡಿಸಿದ ಗೆಜ್ಜೆ, ತವರು ಮನೆಯವರು ಕೊಟ್ಟ ಸರ ಹೀಗೆ ತಮಗೆ ಸಿಕ್ಕಿದ ಉಡುಗೊರೆಗಳನ್ನು ನೋಡುತ್ತಾ ತಮ್ಮ ಮದುವೆ ಮುಂತಾದ ಕಾರ್ಯಕ್ರಮಗಳ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ ಖುಷಿ ಪಡುತ್ತಾರೆ. ಜೊತೆಗೆ ಉಡುಗೊರೆಗಳನ್ನು ಜತನದಿಂದ ಕಾಪಾಡಿಕೊಳ್ಳುತ್ತಾ ಆಗಾಗ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಂತೋಷಪಡುತ್ತಾರೆ.
ಉಡುಗೊರೆ ನೀಡುವಾಗ ಅವರಿಗೆ ಏನು ಇಷ್ಟ ಎಂಬ ವಿಷಯವೂ ಪ್ರಮುಖವಾಗುತ್ತದೆ. ಆಭರಣಗಳು, ಅಲಂಕಾರ ಸಾಮಗ್ರಿ, ಬಳೆ, ಚೈನ್, ಸೀರೆ ಇವೆಲ್ಲ ಹುಡುಗಿಯರಿಗಾದರೆ, ಹುಡುಗರಿಗೆ ಗ್ಯಾಜೆಟ್ಗಳು, ಸ್ಪೋರ್ಟ್ಸ್ ಸಾಮಗ್ರಿಗಳು ಇತ್ಯಾದಿ ಇಷ್ಟವಾಗುವಂಥವುಗಳು. ಇನ್ನು ಕೆಲವರು ಹವ್ಯಾಸ, ಆಸಕ್ತಿ ಇತ್ಯಾದಿ ಅಂಶಗಳನ್ನು ಗಮನಿಸಿಕೊಂಡು ಉಡುಗೊರೆ ನೀಡಬೇಕಾದ ವಸ್ತುಗಳನ್ನು ಆಯ್ಕೆ ಮಾಡುತ್ತಾರೆ. ನನಗೂ ಆಪ್ತರು, ಕ್ಷೇತ್ರದ ಭಕ್ತರು ಉಡುಗೊರೆಗಳನ್ನು ಕೊಡುವುದುಂಟು. ನಾನು ಪ್ರಾಚೀನ ವಸ್ತುಗಳನ್ನು ಸಂಗ್ರಹ ಮಾಡುವುದರಿಂದ ನನ್ನ ಮಗಳು, ಸಹೋದರರು ಪ್ರವಾಸಕ್ಕೆ ಹೋದಾಗ ಅಂತಹವುಗಳನ್ನು ಕೊಂಡು ತಂದು ನನಗೆ ಉಡುಗೊರೆಯಾಗಿ ಕೊಡುವುದುಂಟು.
ಕೆಲವೊಮ್ಮೆ ಉಡುಗೊರೆಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಸಂತಸವನ್ನು ಇಮ್ಮಡಿಗೊಳಿಸುತ್ತವೆ. ಉದಾಹರಣೆಗೆ ಮಕ್ಕಳು ತಮ್ಮ ಮೊದಲ ಸಂಬಳದಲ್ಲಿ ಹೆತ್ತವರಿಗೆ ತರುವ ವಸ್ತುಗಳು, ಪ್ರಿಯತಮ/ ಪ್ರಿಯತಮೆಗೆ ಕೊಡುವ ವಸ್ತುಗಳು, ಗಂಡ ಹೆಂಡತಿಗೆ ಕೊಡುವ ಉಡುಗೊರೆ ಹೀಗೆ ಪ್ರೀತಿಪಾತ್ರರಿಗೆ ನೀಡುವ ಉಡುಗೊರೆಗಳು ಬಹಳಷ್ಟು ವಿಶೇಷವಾಗಿರುತ್ತವೆ.
ಹಾಗೆ ನೋಡಿದರೆ ನಮಗೆಲ್ಲಾ ದೇವರು ಕರುಣಿಸಿದ ಬಹುದೊಡ್ಡ ಉಡುಗೊರೆಯೆಂದರೆ ಈ ಬದುಕು. ಇದನ್ನು ಬಳಸುವುದು ಅಥವಾ ಬಿಡುವುದು ನಮ್ಮ ಕೈಯಲ್ಲೇ ಇದೆ. ಪ್ರತಿ ದಿನ, ಪ್ರತಿ ಕ್ಷಣವೂ ಉಡುಗೊರೆಯೇ ಆಗಿದ್ದು, ಅವೆಲ್ಲವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಅವಕಾಶ ನಮ್ಮ ಮುಂದಿರುತ್ತದೆ. ಸಾಕಷ್ಟು ಬಾರಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪುಗಳು ನಡೆದು ಹೋಗುತ್ತವೆ. ಆಗ ತಪ್ಪನ್ನು ತಿದ್ದಿ, ಸರಿಪಡಿಸಿಕೊಂಡು ಹೊಸ ಪಾಠ ಕಲಿತು ಮುಂದುವರಿಯಬೇಕು. ಹೇಗೆಂದರೆ ನಮ್ಮನ್ನು ಹೆತ್ತದ್ದಕ್ಕೆ ತಂದೆ- ತಾಯಿ ಹೆಮ್ಮೆ ಪಡುವಂತಾಗಬೇಕು. ಇಂತಹ ಜೋಡಿಯನ್ನು ಪಡೆದುದಕ್ಕೆ ಹೆಂಡತಿ/ ಗಂಡ ಗರ್ವ ಪಡುವಂತಾಗಬೇಕು. ಮಕ್ಕಳಿಗೆ ನಾವೇ ಮಾದರಿಯಾಗಬೇಕು. ಒಟ್ಟಿನಲ್ಲಿ ನಮ್ಮವರಿಗೆ ನಾವು ಅಮೂಲ್ಯವಾದ ಉಡುಗೊರೆಯಂತಿರಬೇಕು. ಅಂತಹ ಬಾಳು ನಮ್ಮದಾಗಲಿ. (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)