ಮುಂದಿನ ವರ್ಷದ ವೇಳೆಗೆ ಗಾಜಿಪುರ್​​ನ ಕಸದ ಗುಡ್ಡ ತಾಜ್​ ಮಹಲ್​ ಅನ್ನು ಮೀರಿಸಲಿದೆ

ನವದೆಹಲಿ: ನಗರಗಳು ಬೆಳೆದಂತೆ ಕಸದ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ನಗರಾಡಳಿತಗಳು ಮತ್ತು ಸರ್ಕಾರಗಳಿಗೆ ಕಸ ವಿಲೇವಾರಿ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲಾಗದೆ ಹಲವೆಡೆ ಕಸವನ್ನು ರಾಶಿ ಹಾಕಲಾಗಿದೆ. ದೆಹಲಿಯ ಗಾಜಿಪುರ್​ನಲ್ಲಿ ಕಸವನ್ನು ಗುಡ್ಡೆ ಹಾಕಲಾಗುತ್ತಿದ್ದು, ದಿನೇ ದಿನೇ ಅದರ ಎತ್ತರ ಬೆಳೆಯುತ್ತಿದ್ದು, ಮುಂದಿನ ವರ್ಷದ ವೇಳೆಗೆ ಇದು ತಾಜ್​ ಮಹಲ್ ಅನ್ನೂ ಮೀರಿಸಲಿದೆ ಎನ್ನುತ್ತಿವೆ ವರದಿಗಳು.

ದೆಹಲಿಯಲ್ಲಿ ಸಂಗ್ರಹವಾಗುವ ಕಸವನ್ನು ನೇರವಾಗಿ ಗಾಜಿಪುರ್​ನಲ್ಲಿರುವ ಮೈದಾನದಲ್ಲಿ 1984ರಿಂದ ತಂದು ಸುರಿಯಲಾಗುತ್ತಿದೆ. 2002ರಲ್ಲಿ ಇಲ್ಲಿ ಕಸ ಸುರಿಯುವುದನ್ನು ನಿಲ್ಲಿಸಬೇಕಿತ್ತು. ಆದರೆ, ಬೇರೆ ಎಲ್ಲಿಯೂ ಕಸ ಸುರಿಯಲು ಜಾಗ ಇಲ್ಲದಿದ್ದರಿಂದ ದಿನವೂ ಇಲ್ಲಿಗೆ ನೂರಾರು ಟ್ರಕ್​ಗಳು ಸುಮಾರು 2,000 ಟನ್​ ಕಸ ತಂದು ಸುರಿಯುತ್ತಿವೆ. ಪ್ರಸ್ತುತ ಕಸದ ಗುಡ್ಡೆ ಸುಮಾರು 40 ಫುಟ್​ಬಾಲ್​ ಮೈದಾನಗಳಷ್ಟು ವಿಸ್ತೀರ್ಣವನ್ನು ವ್ಯಾಪಿಸಿಕೊಂಡಿದ್ದು, 65 ಮೀಟರ್​ (213 ಅಡಿ) ಇದೆ.

ಪ್ರತಿ ವರ್ಷ ಇಲ್ಲಿ ಕಸದ ರಾಶಿ 10 ಮೀ. ನಷ್ಟು ಹೆಚ್ಚುತ್ತಿದೆ. ಇದೇ ವೇಗದಲ್ಲಿ ಇಲ್ಲಿ ಕಸ ಸಂಗ್ರಹವಾದರೆ 2020ರ ವೇಳೆಗೆ ಕಸದ ರಾಶಿಯ ಎತ್ತರ ಆಗ್ರಾದ ಪ್ರಸಿದ್ಧ ತಾಜ್​ ಮಹಲ್​ (73 ಮೀ.)ಗಿಂತಲೂ ಹೆಚ್ಚಾಗಲಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

2018ರಲ್ಲಿ ದೆಹಲಿಯಲ್ಲಿ ಭಾರಿ ಮಳೆ ಸುರಿದಾಗ ಕಸದ ರಾಶಿಯ ಒಂದು ಭಾಗ ಕುಸಿದು ಇಬ್ಬರು ಮೃತಪಟ್ಟಿದ್ದರು. ಆ ನಂತರ ಇಲ್ಲಿ ಕಸ ಹಾಕುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ಕಸ ಸುರಿಯಲು ಬೇರೆ ಸ್ಥಳ ಸಿಗದ ಹಿನ್ನೆಲೆಯಲ್ಲಿ ಮತ್ತೆ ಇಲ್ಲಿಯೇ ಕಸ ಸುರಿಯಲಾಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *