ತೂಬಗೆರೆ: ಎಲ್ಲೆಲ್ಲೂ ದೇವರ ನಾಮಸ್ಮರಣೆ, ರಥ ಎಳೆಯಲು ನಾ ಮುಂದು ತಾ ಮುಂದು ಎಂಬಂತೆ ಮುಗಿಬಿದ್ದ ಜನ. ನಾಗರ ಕಲ್ಲುಗಳಿಗೆ ಹಾಲೆರೆದು ಸಡಗರದಲ್ಲಿ ಮಿಂದೆದ್ದ ಭಕ್ತರು, ಡೋಲು, ನಗಾರಿಯೊಂದಿಗೆ ಜಾನಪದ ಕಲಾತಂಡಗಳ ಮೆರವಣಿಗೆ, ರಸ್ತೆಯಲ್ಲಿ ತಂಪು ಪಾನಿಯ ವಿತರಣೆ…
ಇಂತಹ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಘಾಟಿ ಸುಬ್ರಮಣ್ಯ ಕ್ಷೇತ್ರ. ಕ್ಷೇತ್ರದಲ್ಲಿ ಪುಷ್ಯ ಶುದ್ಧ ಷಷ್ಠಿಯಾದ ಬುಧವಾರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನೆರವೇರಿತು.
ಮಧ್ಯಾಹ್ನ 12.15ಕ್ಕೆ ಮೀನ ಲಗ್ನದಲ್ಲಿ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ದೊಡ್ಡಬಳ್ಳಾಪುರ ಶಾಸಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಬಾಳೆ ಹಣ್ಣು-ದವನ ಅರ್ಪಿಸಿ ಕೃತಾರ್ಥರಾದರು.
ರಥೋತ್ಸವದ ಅಂಗವಾಗಿ ಸ್ವಾಮಿಗೆ ಬೆಳಗಿನ ಜಾವ 2.30ರಿಂದ ವಿಶೇಷವಾಗಿ ರುದ್ರಾಭಿಷೇಕ, ಕ್ಷಿರಾಭಿಷೇಕ, ಗಂಧಾಭಿಷೇಕ, ಕುಂಕುಮ, ಸುಗಂಧ ದ್ರವ್ಯ ಅಭಿಷೇಕ ನೆರವೇರಿಸಲಾಗಿಯಿತು. ಮುಂಜಾನೆ 5.35ಕ್ಕೆ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಮಹಾಮಂಗಳಾರತಿ ಮಾಡಲಾಯಿತು.
ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ಬಸ್, ಕುಡಿಯುವ ನೀರಿನ ವ್ಯವಸ್ಥೆ, ಅನ್ನಸಂತರ್ಪಣೆ ಮಾಡಲಾಗಿತ್ತು. ತಾಲೂಕಿನ ಆಂಧ್ರದೇವಾಂಗ ಸಂಘ ಸೇರಿ ಹಲವು ಸಂಘ-ಸಂಸ್ಥೆ ಅನ್ನ ಸಂತರ್ಪಣೆ ನೇತೃತ್ವ ವಹಿಸಿದ್ದವು.
ಪೊಲೀಸ್ ಭದ್ರತೆ: ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. 1 ಡ್ರೋನ್ ಕ್ಯಾಮರಾ, ಆಯಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಮೂವರು ಇನ್‌ಸ್ಪೆಕ್ಟೆರ್, 15 ಸಬ್‌ಇನ್‌ಸ್ಪೆಕ್ಟೆರ್, 250 ಸಿಬ್ಬಂದಿ ನಿಯೋಜಿಸಲಾಗಿತ್ತು. ಕೆಲವೆಡೆ ಟ್ರಾಫಿಕ್ ಸಮಸ್ಯೆಯಿಂದ ಜನರು ಪರದಾಡುವಂತಾಯಿತು.
ನಾಗರಾಧನೆಗೆ ಭಕ್ತರ ದಂಡು: ದೇಗುಲದ ಅಶ್ವತ್ಥಕಟ್ಟೆಯ ಮೇಲಿನ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲು ಅಪಾರಸಂಖ್ಯೆಯ ಭಕ್ತರು ಮುಗಿಬಿದ್ದರು. ನಾಗರಕಲ್ಲಿನ ಪೂಜೆ, ಹಾಲೆರೆಯುವುದರಿಂದ ಮದುವೆ ಆಗದವರಿಗೆ ಮದುವೆಯಾಗುವುದು, ನಾಗರದೋಷ ನಿವಾರಣೆಯಾಗುವ ನಂಬಿಕೆ. ಈ ನಿಟ್ಟಿನಲ್ಲಿ ಬ್ರಹ್ಮರಥೋತ್ಸವದಂದು ನೂರಾರು ಮಹಿಳೆಯರು ಹಾಲೆರೆದು ನಾಗರಗಳನ್ನು ಇಟ್ಟು ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುವ ದೃಶ್ಯ ಕಂಡು ಬಂತು.
ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕ: ರಥೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೂರು ದಿನಗಳಿಂದ ವಿವಿಧ ಸಾಂಸ್ಕೃತಿಕ, ಜಾನಪದ, ಪೌರಾಣಿಕ ನಾಟಕ, ಸಾಮಾಜಿಕ ನಾಟಕ, ಯಕ್ಷಗಾನ, ಸುಗಮಸಂಗೀತ ಕಛೇರಿ, ಭಜನೆ ಕಾರ್ಯಕ್ರಮಗಳು ನಡೆದವು. ಹಾಗೆಯೇ ರಥೋತ್ಸವದಲ್ಲಿ ಜಾನಪದ ಕಲಾವಿದರು, ವಿವಿಧ ವೇಷ ಧರಿಸಿದ್ದ ಕಲಾವಿದರು ಗಮನ ಸೆಳೆದರು.