ಶಿವಮೊಗ್ಗ: ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಷಯ. ಮಹಿಳೆಯರಿಗೆ ಕೃಷಿ ವರದಾನವೆಂದರೆ ತಪ್ಪಾಗಲಾರದು ಎಂದು ಪ್ರಗತಿಪರ ರೈತ ಮಹಿಳೆ ಕನ್ನಂಗಿ ಆಶಾ ಶೇಷಾದ್ರಿ ಅಭಿಪ್ರಾಯಪಟ್ಟರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಕೃಷಿ ನಿರತ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಎಂಬುದು ನಿವೃತ್ತಿಯೇ ಇಲ್ಲದ ವೃತ್ತಿ. ಹಿಂದಿದ್ದ ಆಹಾರ ಭದ್ರತೆ, ಆದಾಯ ಇಂದು ಕೃಷಿಯಲ್ಲಿ ಕಡಿತವಾಗಿರುವುದು ಗಮನಾರ್ಹ ಸಂಗತಿ ಎಂದರು.
ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸುವ ವಿವಿಧ ತರಬೇತಿಗಳಲ್ಲಿ ರೈತ ಮಹಿಳೆಯರು ಭಾಗವಹಿಸಿ, ನೂತನ ತಂತ್ರಜ್ಞಾನ, ಕೃಷಿಯಲ್ಲಿನ ವಿನೂತನ ಆವಿಷ್ಕಾರ, ವಿವಿಧ ಬೆಳೆಗಳು, ಪುಷ್ಪ ಕೃಷಿ, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ, ನಿರಂತರ ಆದಾಯಕ್ಕೆ ಕೃಷಿಯೇತರ ಚಟುವಟಿಕೆಗಳಾದ ಕುರಿ, ಕೋಳಿ, ಮೀನು ಸಾಕಣೆ, ಹೈನುಗಾರಿಕೆ, ಜೇನು ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕೆಂದರು.
ಕುಲಪತಿ ಡಾ. ಆರ್.ಸಿ.ಜಗದೀಶ ಮಾತನಾಡಿ, ಮಹಿಳೆಯರು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಾರ್ಮಿಕ ಮೇಲ್ವಿಚಾರಣೆ, ಕೊಯ್ಲಿನ ನಂತರದ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೈನು ಉತ್ಪಾದನೆ, ಜಾನುವಾರು ನಿರ್ವಹಣೆ ಜತೆಗೆ ಕುಟುಂಬದ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಮಹಿಳಾ ಕೃಷಿ ಸಾಧಕರಾದ ಡ್ರೋನ್ ದೀದಿ ಚುರ್ಚಿಗುಂಡಿಯ ಆಶಾರಾಣಿ, ಮಹಿಳಾ ಉದ್ಯಮಿ ತಲವಾಟದ ಪ್ರತಿಭಾ ತ್ರಯಂಬಕ ರಾವ್, ದೊಡ್ಡೇರಿ ಗ್ರಾಮದ ಎಂ.ಎಸ್.ಅರುಣಾದೇವಿ ಅವರನ್ನು ಸನ್ಮಾನಿಸಲಾಯಿತು.
ವಿವಿ ಕುಲಸಚಿವ ಡಾ.ಕೆ.ಸಿ.ಶಶಿಧರ, ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾ ನಾಯ್ಕ, ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲ್, ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ಎಂ.ಸಿ.ಅಂಜಲಿ ಇತರರಿದ್ದರು.