ಸಿರಗುಪ್ಪ: ರೋಗಗಳು ಬರುವ ಮುನ್ನ ಎಚ್ಚರವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದು ನಗರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿದ್ಯಾಶ್ರೀ ಹೇಳಿದರು.
ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವಾಗಿದ್ದರೆ ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಬೇಕು.
ಇಂಥ ಆರೋಗ್ಯ ಶಿಬಿರಗಳಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದರು. ಪೌರಾಯುಕ್ತ ಗುರುಪ್ರಸಾದ್, ನಗರ ಆರೋಗ್ಯ ಕೇಂದ್ರದ ಡಾ.ಪಲ್ಲವಿ, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ ಇತರರಿದ್ದರು.