ಹೊಳೆನರಸೀಪುರ: ಭಾರತೀಯ ಅಂಚೆ ಇಲಾಖೆಗೆ 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಇದ್ದು, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದೆ ಎಂದು ಹಾಸನ ಅಂಚೆ ಕಚೇರಿಯ ಹಿರಿಯ ವ್ಯವಸ್ಥಾಪಕ ಪ್ರಕಾಶ್‌ನಾಯಕ್ ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕಾರ್ಯಕ್ರಮದಿಂದ ಇಲಾಖೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವಾಗಲಿದೆ. ಜತೆಗೆ ಅಂಚೆ ಕಚೇರಿಯಲ್ಲಿ ಬಹಳಷ್ಟು ಸೌಲಭ್ಯಗಳು ಇದ್ದು ಅವುಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಸ್ತುತ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆಯಲ್ಲಿ ಗ್ರಾಹಕರಿಗೆ ಕನಿಷ್ಠ 500 ರೂ. ಠೇವಣಿ ಇಟ್ಟರೆ ಪ್ರತಿವರ್ಷದ ಕೊನೆಯಲ್ಲಿ ಬಡ್ಡಿ ಜತೆಗೆ ಎಟಿಎಂ ಸೌಲಭ್ಯ ದೊರೆಯಲಿದೆ. ಖಾತೆಯಲ್ಲಿ 10 ಸಾವಿರ ರೂ. ವರೆಗೆ ತೆರಿಗೆ ಮುಕ್ತ ಶೇ.ನಾಲ್ಕರಷ್ಟು ಬಡ್ಡಿ ದೊರೆಯಲಿದೆ ಎಂದರು.
ಇದೇ ರೀತಿ ಆವರ್ತ ನಿಧಿಗೆ 6.7 ಬಡ್ಡಿ, ಎಂಐಎಸ್‌ಗೆ ಶೇ.7.4 ಬಡ್ಡಿ , ತ್ರೈಮಾಸಿಕ ಚಕ್ರಬಡ್ಡಿ ಮೂರು ವರ್ಷದ ವರೆಗೆ 7.1 ರಷ್ಟು ದೊರೆಯಲಿದೆ. ಭಾರತೀಯ ಜೀವ ವಿಮೆಯಂತೆ ಅಂಚೆ ಇಲಾಖೆಯಲ್ಲಿಯೂ ವಿಮೆ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಅಪಘಾತ ವಿಮೆ ದೊರೆಯಲಿದ್ದು, ಗರಿಷ್ಠ 10 ಲಕ್ಷ ರೂ.ವರೆಗೂ ದೊರೆಯಲಿದೆ. ಪ್ರತಿಯೊಬ್ಬರೂ ಅಂಚೆ ಇಲಾಖೆ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.
ಇದೇ ಸಂದರ್ಭಲ್ಲಿ ಹೊಳೆನರಸೀಪುರ ಅಂಚೆ ಇಲಾಖೆಯಿಂದ ವರ್ಗಾವಣೆಗೊಂಡ ಯಶೋಧಾ ಹಾಗೂ ಮಧು ಅವರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಕೆ.ಶ್ರೀಧರ್, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎನ್.ಪ್ರಭಾಕರ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಈರಯ್ಯ, ಪಟ್ಟಣದ ಅಂಚೆ ಇಲಾಖೆಯ ಅಂಚೆ ನಿರೀಕ್ಷಕ ಕೆ.ಮಹೇಶ್, ಹಾಸನ ವಿಭಾಗದ ಸಹಾಯಕ ಅಂಚೆ ಅಧೀಕ್ಷಕಿ ಶೋಭಾನಾಯಕ್, ಅಂಚೆ ಇಲಾಖೆ ಸುಧಾಕರ್, ನಂದಿನಿ, ಆನಂದ್ ಇದ್ದರು.