ಹೊಳೆನರಸೀಪುರ: ಭವಿಷ್ಯದಲ್ಲಿ ಕುಟುಂಬವನ್ನು ಆರ್ಥಿಕವಾಗಿ ರಕ್ಷಣೆ ಮಾಡಲು ಜೀವ ವಿಮೆ ಮಾಡಿಸಬೇಕಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮಹಾ ಪ್ರಬಂಧಕ ಟಿ.ಆರ್.ಅರುಣ್ ಹೇಳಿದರು.
ಪಟ್ಟಣದ ಕರ್ಣಾಟಕ ಬ್ಯಾಂಕ್‌ನಲ್ಲಿ ಕೆಬಿಎಲ್ ಸುರಕ್ಷಾ ವಿಮಾ ಯೋಜನೆಯಡಿ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ಜೀವನ ನಂತರ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲು ಜೀವ ವಿಮೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಉತ್ತಮ ನಿರ್ವಹಣೆ ನಡೆಸುತ್ತಿದೆ. ಕರ್ಣಾಟಕ ಬ್ಯಾಂಕ್ ಖಾತೆದಾರರು ಕೆಬಿಎಲ್ ಸುರಕ್ಷಾ ಇನ್ಶೂರೆನ್ಸ್ ಯೋಜನೆಗೆ ಒಳಪಡಬಹುದು. ಯೋಜನೆಯ ನಿಯಮದಂತೆ ಖಾತೆಯಿಂದ ಪ್ರತಿ ವರ್ಷಕ್ಕೆ 300 ರೂ. ಪ್ರೀಮಿಯಂ ಸಂದಾಯ ಮಾಡಬೇಕಿದೆ. ವಿಮಾ ಮಾಡಿಸಿದ ವ್ಯಕ್ತಿ ಅಪಘಾತದಿಂದ ಮೃತಪಟ್ಟರೆ ಆತನ ಕುಟುಂಬಕ್ಕೆ ಪರಿಹಾರವಾಗಿ 10 ಲಕ್ಷ ರೂ. ಲಭ್ಯವಾಗುತ್ತದೆ. ವಿಮಾ ಕಂತು 150 ರೂ. ಪಾವತಿದಾರರಿಗೆ 5 ಲಕ್ಷ ರೂ. ಸಿಗಲಿದೆ ಎಂದು ತಿಳಿಸಿದರು.
ಕಳೆದ ಕೆಲ ದಿನಗಳ ಹಿಂದೆ ಮೃತಪಟ್ಟ ಬ್ಯಾಂಕ್‌ನ ಗ್ರಾಹಕ ಹಾಗೂ ವಿಮಾದಾರ ದಿವಂಗತ ಟಿ.ಎಸ್.ಮಹೇಶ್ ಪತ್ನಿ ಡಿ.ಎಸ್.ಉಷಾ ಅವರಿಗೆ ಬ್ಯಾಂಕ್ ವತಿಯಿಂದ 10 ಲಕ್ಷ ರೂ.ಮೊತ್ತದ ಪರಿಹಾರ ಚೆಕ್ ನೀಡಲಾಯಿತು. ಹಾಸನ ವಲಯ ಬ್ಯಾಂಕ್ ಅಧಿಕಾರಿ ಉಮೇಶ್‌ಭಟ್, ಶಾಖಾ ವ್ಯವಸ್ಥಾಪಕ ರಾಕೇಶ್‌ಜಿಂಗಾಡೆ ಇತರರು ಇದ್ದರು.