ರಾವಂದೂರು: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಸಕ್ರೀಯವಾಗಿ ತೊಡಗಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ವ್ಯಾಪಮ್ ಅಧ್ಯಕ್ಷೆ ಪ್ರೀತಿ ಅರಸ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗೂ ಪ್ರಾಶಸ್ತ್ಯ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕ್ರೀಡಾಕೂಟದಲ್ಲಿನ ವಿಜೇತ ತಂಡಕ್ಕೆ ಬಹುಮಾನ ಹಾಗೂ ಜೆರ್ಸಿಯನ್ನು ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್ ನೀಡಿದರು.
ಶಿಕ್ಷಣ ಸಂಯೋಜಕ ಸ್ವಾಮಿ, ಬಿಆರ್‌ಪಿ ಶ್ರೀನಿಧಿ, ಅತ್ತಿಗೋಡು ಶಾಲೆಯ ಎಸ್‌ಬಿಎಂಸಿ ಅಧ್ಯಕ್ಷ ಅಶೋಕ್, ಪ್ರೌಢಶಾಲೆ ಮುಖ್ಯಶಿಕ್ಷಕ ನಾಗಶೆಟ್ಟಿ, ರಾಮಚಂದ್ರ, ರಮೇಶ್, ಪಾರ್ಥಸಾರಥಿ, ರೇವಣ್ಣ, ಸಿಆರ್‌ಪಿ ರಮೇಶ್, ಚೇತನ್, ಚಂದ್ರಶೇಖರ್, ಗ್ರಾಪಂ ಸದಸ್ಯ ಲಲಿತಾ ರಮೇಶ್, ಶೇಖರ್, ಬಸವರಾಜ್, ಫಣೀಂದ್ರ ಇತರರು ಇದ್ದರು.