ಪ್ರತಿಭಟನೆ ಬಿಟ್ಟು ಕೆಲಸಕ್ಕೆ ತೆರಳಿ, ಇಲ್ಲದಿದ್ದರೆ… ವೈದ್ಯರಿಗೆ ಮಮತಾ ಬ್ಯಾನರ್ಜಿ ವಾರ್ನಿಂಗ್​

ಪಶ್ಚಿಮಬಂಗಾಳ: ಇಲ್ಲಿನ ಎನ್​ಆರ್​ಎಸ್​ ವೈದ್ಯಕೀಯ ಕಾಲೇಜಿಗೆ ಅನಾರೋಗ್ಯದಿಂದ ದಾಖಲಾಗಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದ. ಇದರಿಂದ ಸಿಟ್ಟಿಗೆದ್ದ ಆತನ ಕುಟುಂಬದವರು ಆತನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಅಲ್ಲಿನ ಕಿರಿಯ ವೈದ್ಯ ಪರಿಬೊಹೊ ಮುಖರ್ಜಿ ಎಂಬುವರನ್ನು ಥಳಿಸಿದ್ದರು.

ಇದರಿಂದ ಸಿಟ್ಟಿಗೆದ್ದ ರಾಜ್ಯದ ವೈದ್ಯರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಇಂದು ಕೂಡ ಮುಂದುವರಿಸಿದ್ದರು. ಆದರೆ, ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈದ್ಯರಿಗೆ ಖಡಕ್​ ಎಚ್ಚರಿಕೆ ನೀಡಿದ್ದು ಕೂಡಲೇ ಕೆಲಸಕ್ಕೆ ಹಾಜರಾಗಿ ಎಂದು ಆದೇಶ ನೀಡಿದ್ದಾರೆ. ಅಲ್ಲದೆ, ಆದೇಶ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕೋಲ್ಕತ್ತದ ಎಸ್​ಎಸ್​ಕೆಎಂ ಆಸ್ಪತ್ರೆಯ ಎದುರು ಕಿರಿಯ ವೈದ್ಯರು ನಮಗೆ ನ್ಯಾಯಬೇಕು ಎಂದು ಕೂಗುತ್ತ ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿದ ದೀದಿ, ಕೂಡಲೇ ಕರ್ತವ್ಯಕ್ಕೆ ಮರಳಿ. ಪ್ರತಿಭಟನೆ ಬಿಟ್ಟು ಕೆಲಸಕ್ಕೆ ಹಾಜರಾಗುವುದಿಲ್ಲವೋ ಅವರ ವಿರುದ್ಧ ಕ್ರಮ ನಿಶ್ಚಿತ. ಅಂತವರು ಕೂಡಲೇ ಹಾಸ್ಟೆಲ್​ ಖಾಲಿ ಮಾಡಬೇಕಾಗುತ್ತದೆ ಎಂದು ಆಕ್ರೋಶದಿಂದ ಹೇಳಿದರು. ಅಲ್ಲದೆ ವೈದ್ಯರಿಗೆ ಕೆಲಸಕ್ಕೆ ತೆರಳಲು ಡೆಡ್​ಲೈನ್​ ಕೂಡ ನೀಡಿದ್ದಾರೆ.

ರಾಜ್ಯ ಪ್ರತಿ ವೈದ್ಯರಿಗಾಗಿ 25 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಅವರು ಕೆಲಸ ಮಾಡುವುದು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ವೈದ್ಯರೆಲ್ಲ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದರಿಂದ ರೋಗಿಗಳ ಪಾಡು ತುಂಬ ಕಷ್ಟಕರವಾಗಿದೆ. ಸಾವಿರಾರು ರೋಗಿಗಳು, ಅವರ ಸಂಬಂಧಿಕರು ಪ್ರತಿ ಸರ್ಕಾರಿ ಆಸ್ಪತ್ರೆಗಳ ಎದುರು ಕಾಯುತ್ತಿದ್ದಾರೆ. ಇಂದು ಮುಂಜಾನೆಯಂತೂ ಎನ್​ಆರ್​ಎಸ್​ ಆಸ್ಪತ್ರೆಯೆದುರು ರೋಗಿಗಳು, ಅವರ ಸಂಬಂಧಿಕರಿಂದ ರಸ್ತೆಯೇ ಬ್ಲಾಕ್​ ಆಗಿತ್ತು. ನಂತರ ಪೊಲೀಸರು ಆಗಮಿಸಿ ತೆರವುಗೊಳಿಸಿದರು.

ಹೆಲ್ಮೆಟ್​ ಹಾಕಿ ಪ್ರತಿಭಟಿಸಿದ ಏಮ್ಸ್​ ವೈದ್ಯರು

ಪಶ್ಚಿಮಬಂಗಾಳದಲ್ಲಿ ನಡೆದಿದ್ದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನವದೆಹಲಿಯ ಏಮ್ಸ್​ ವೈದ್ಯರು ಹೆಲ್ಮೆಟ್​, ತಲೆಗೆ ಬ್ಯಾಂಡೇಜ್​ ಹಾಕಿಕೊಂಡು ಕೆಲಸ ಮಾಡಿದರು. ಈ ಮೂಲಕ ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿದರು.

Leave a Reply

Your email address will not be published. Required fields are marked *