ಜರ್ಮನಿಯಲ್ಲಿ ಕನ್ನಡಿಗನ ಹತ್ಯೆ

ಕುಂದಾಪುರ/ಮಂಗಳೂರು: ಜರ್ಮನಿಯ ಮ್ಯೂನಿಚ್​ನಲ್ಲಿ ಕುಂದಾಪುರ ಮೂಲದ ದಂಪತಿ ಮೇಲೆ ಮಾರಕಾಯುಧದಿಂದ ನಡೆದ ದಾಳಿಯಲ್ಲಿ ಪತಿ ಮೃತಪಟ್ಟಿದ್ದು, ಪತ್ನಿ ಗಂಭೀರ ಗಾಯಗೊಂಡಿದ್ದಾರೆ.

ಬಿ.ವಿ. ಪ್ರಶಾಂತ್ ಬಸ್ರೂರ್(51) ಮತ್ತು ಅವರ ಪತ್ನಿ ಸ್ಮಿತಾ ಬಸ್ರೂರ್(40) ವಾಸವಿದ್ದ ಅಪಾರ್ಟ್​ವೆುಂಟ್​ನಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಗಲಾಟೆ ಸಂದರ್ಭ ವ್ಯಕ್ತಿಯೊಬ್ಬ ಇಬ್ಬರಿಗೂ ಚೂರಿಯಿಂದ ಇರಿದಿದ್ದು, ಘಟನೆಯಲ್ಲಿ ಪ್ರಶಾಂತ್ ಮೃತಪಟ್ಟಿದ್ದಾರೆ. ಸ್ಮಿತಾ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಪತಿಯ ಪುತ್ರಿ ಸಾಕ್ಷಿ ಬಸ್ರೂರ್ (15) ಹಾಗೂ ಪುತ್ರ ಶ್ಲೋಕ್ ಬಸ್ರೂರ್ (10) ಕ್ಷೇಮವಾಗಿದ್ದಾರೆ. ಸಂಬಂಧಿಕರು ಅಲ್ಲಿಗೆ ತೆರಳುವವರೆಗೆ ಮಕ್ಕಳ ಆರೈಕೆ ಮಾಡುವಂತೆ ಭಾರತೀಯ ರಾಯಭಾರ ಕಚೇರಿಗೆ ಸೂಚನೆ ನೀಡಿದ್ದೇನೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

ಜರ್ಮನಿಯಲ್ಲಿ ನಡೆದಿರುವ ದುರ್ಘಟನೆ ಕುರಿತು ಕುಟುಂಬ ಸದಸ್ಯರಿಗೆ ಪೂರ್ಣ ಮಾಹಿತಿ ಇಲ್ಲ. ಶುಕ್ರವಾರ ಬೆಳಗ್ಗೆ ಅವರ ಅಪಾರ್ಟ್​ವೆುಂಟ್​ನಲ್ಲೇ ವಾಸಿಸುತ್ತಿದ್ದ ಯುವಕನೊಂದಿಗೆ ಅವರಿಗೆ ಯಾವುದೋ ವಿಚಾರಕ್ಕೆ ಮಾತುಕತೆ ನಡೆದಿದ್ದು, ಆತ ಚೂರಿಯಿಂದ ಇಬ್ಬರಿಗೂ ಇರಿದಿದ್ದಾನೆ. ಆತ ಮೂಲತಃ ಆಫ್ರಿಕಾದ ನ್ಯೂಗಿನಿಯಾದ ವಲಸೆಗಾರ ಎಂದು ತಿಳಿದುಬಂದಿದೆ. ಪ್ರಶಾಂತ್ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟರು. ಗಂಭೀರ ಗಾಯಗೊಂಡಿರುವ ಸ್ಮಿತಾ ಚೇತರಿಸಿಕೊಳ್ಳಲು ಕನಿಷ್ಠ 3 ವಾರ ಬೇಕಾಗಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿರುವುದಾಗಿ ಪ್ರಶಾಂತ್ ಸಹೋದರಿ ಸಾಧನಾ ಅವರ ಪತಿ ಶ್ರೀನಿವಾಸ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಮೂಲ ಬಸ್ರೂರು

ಪ್ರಶಾಂತ್ ತಂದೆ ದಿ.ಬಿ.ಎನ್.ವೆಂಕಟರಮಣ (ಪಾಪಣ್ಣ) ಹಾಗೂ ತಾಯಿ ವಿನಯಾ (ಬೇಬಿ) ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾಗಿದ್ದು, ವ್ಯವಹಾರ ಹಾಗೂ ಕೃಷಿ ನಿಮಿತ್ತ ಕುಟುಂಬ ಸಮೇತರಾಗಿ ಸಾಗರದಲ್ಲಿ ನೆಲೆಸಿದ್ದರು. ವೆಂಕಟರಮಣ ಅವರ ಪೂರ್ವಿಕರು ಕುಂದಾಪುರ ಸಮೀಪದ ಬಸ್ರೂರಿನವರು. ಹಾಗಾಗಿ ಕುಟುಂಬ ಸದಸ್ಯರ ಹೆಸರಿನೊಂದಿಗೆ ಬಸ್ರೂರು ಉಳಿದುಕೊಂಡಿದೆ. 13 ವರ್ಷಗಳ ಹಿಂದೆ ಕುಂದಾಪುರದ ಕುಂದೇಶ್ವರ ದೇವಸ್ಥಾನದ ಹಿಂದೆ ಮನೆ ಕಟ್ಟಿಸಿದ್ದು, ಅಲ್ಲಿ ಪ್ರಶಾಂತ ಅವರ ತಾಯಿ ವಿನಯಾ ವಾಸಿಸುತ್ತಿದ್ದರು. ಸ್ಮಿತಾ ಸಿದ್ಧಾಪುರದ ಖ್ಯಾತ ವೈದ್ಯ ಡಾ.ಚಂದ್ರಮೌಳಿ ಎಂಬುವವರ ಪುತ್ರಿ.

15 ವರ್ಷಗಳಿಂದ ವಾಸ

ಸಿದ್ಧಾಪುರದವರಾದ ಸ್ಮಿತಾ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಗಳಿಸಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಓದಿದ್ದರು. ಪ್ರಶಾಂತ್ ಸಾಗರದ ಎಸ್.ಎಂ. ಪಾಲಿಟೆಕ್ನಿಕ್​ನಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಓದಿದ್ದು, ಬಳಿಕ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದರು. ಕೆಲವರ್ಷ ಬೆಂಗಳೂರಿನಲ್ಲಿದ್ದ ದಂಪತಿ, ಬಳಿಕ ಜರ್ಮನಿಗೆ ತೆರಳಿದ್ದರು. ಅಲ್ಲಿ ‘ಏರ್​ಬಸ್ ಹೆಲಿಕಾಪ್ಟರ್ಸ್’ ಸಂಸ್ಥೆಯಲ್ಲಿ ಪ್ರಶಾಂತ್ ಇಂಜಿನಿಯರ್ ಆಗಿದ್ದರು, ಅದೇ ಸಂಸ್ಥೆಯಲ್ಲಿ ಸ್ಮಿತಾ ಕೂಡ ಕೆಲಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಅಲ್ಲಿ ನೆಲೆಸಿದ್ದು, ಕಳೆದ ವರ್ಷವಷ್ಟೇ ಅಲ್ಲಿನ ಪೌರತ್ವವೂ ಲಭಿಸಿತ್ತು ಎನ್ನಲಾಗಿದೆ.

ತಾಯಿಯನ್ನು ಜರ್ಮನಿಗೆ ಕರೆದೊಯ್ಯಬೇಕಿತ್ತು

ಪ್ರಶಾಂತ್-ಸ್ಮಿತಾ ಕಳೆದ ವರ್ಷವಷ್ಟೇ ಮಕ್ಕಳೊಂದಿಗೆ ಊರಿಗೆ ಬಂದು ಹೋಗಿದ್ದರು. ಪ್ರಶಾಂತ್ ತಾಯಿ ವಿನಯಾ ಕುಂದಾಪುರದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಜರ್ಮನಿಗೆ ಕರೆಸಿಕೊಳ್ಳುವ ಸಿದ್ಧತೆ ನಡೆದಿತ್ತು. ಆದರೆ ಅವರ ಪಾಸ್​ಪೋರ್ಟ್ ಅವಧಿ ಮುಗಿದಿದ್ದು, ಜರ್ಮನಿಗೆ ಹೋಗಲು ಕಾನೂನು ತೊಡಕಿನಿಂದಾಗಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಸಂರ್ಪಸಿದ್ದರು. ಪಾಸ್​ಪೋರ್ಟ್ ತುರ್ತು ನವೀಕರಣಕ್ಕಾಗಿ ಹೆಗ್ಡೆ ಅವರು ಅಧಿಕಾರಿಗಳನ್ನು ಸಂರ್ಪಸಿದ್ದು, ಸೋಮವಾರ ಬೆಂಗಳೂರಿಗೆ ಬರುವಂತೆ ವಿನಯಾಗೆ ಸೂಚನೆ ಬಂದಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಪ್ರಶಾಂತ್ ಏ.9ಕ್ಕೆ ಕುಟುಂಬ ಸಮೇತ ಊರಿಗೆ ಮರಳುವವರಿದ್ದರು. ನಂತರ ತಾಯಿಯನ್ನು ಜರ್ಮನಿಗೆ ಕರೆದುಕೊಂಡು ಹೋಗುವ ಸಿದ್ಧತೆ ನಡೆದಿತ್ತು.

ವಿದೇಶಕ್ಕೆ ತೆರಳಲಿರುವ ಕುಟುಂಬ ಸದಸ್ಯರು

ಎರಡೂ ಕುಟುಂಬಗಳ ಸದಸ್ಯರು ಆಪ್ತರನ್ನು ಸಂರ್ಪಸಿ ಸಲಹೆ ಪಡೆಯತ್ತಿದ್ದಾರೆ. ಜರ್ಮನ್ ಕಾನೂನಿಗೆ ಅನುಸಾರ ನಿರ್ಧರಿಸ ಬೇಕಾದ್ದರಿಂದ ರಾಯಭಾರ ಕಚೇರಿಯ ಸಂದೇಶಕ್ಕಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಂದಿಸುತ್ತಿದ್ದು, ರಾಯಭಾರ ಕಚೇರಿಯ ಸಂದೇಶ ಬಂದ ಬಳಿಕ ಸ್ಮಿತಾ ತಂದೆ-ತಾಯಿ, ಪ್ರಶಾಂತ್ ತಾಯಿ ತೆರಳುವ ಸಾಧ್ಯತೆಗಳಿವೆ. ಪ್ರಶಾಂತ್ ಸಹೋದರ ಪ್ರಭಾತ್ ಬೆಂಗಳೂರಿನಲ್ಲಿದ್ದು, ಅವರನ್ನು ಜರ್ಮನಿಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.