300 ರೋಗಿಗಳಿಗೆ ಯಮನಾದ ನರ್ಸ್

ಬರ್ಲಿನ್: ರೋಗಿಗಳ ಸರಣಿ ಕೊಲೆಗಾರ ಶುಶ್ರೂಷಕ ನೀಲ್ಸ್ ಹೊಗೆಲ್(42) ವಿರುದ್ಧ ಇನ್ನೂ 100 ಜನರ ಕೊಲೆ ಮಾಡಿದ ಆರೋಪ ಹೊರಿಸಲಾಗಿದೆ. ಜೋಸೆಫ್ ಡೆಲ್​ವೆುನ್​ಹಾರ್ಸ್ಟ್ ಆಸ್ಪತ್ರೆಯಲ್ಲಿ 2000ನೇ ಇಸವಿ ಯಿಂದ ಹೊಗೆಲ್ 5 ವರ್ಷಗಳ ಅವಧಿಯಲ್ಲಿ ಒಟ್ಟು 300 ಜನರನ್ನು ಹತ್ಯೆ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ನೀಲ್ಸ್ ಹೊಗೆಲ್ ಇಬ್ಬರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಈತನ ವಿರುದ್ಧದ ಸರಣಿ ಕೊಲೆ ಪ್ರಕರಣಗಳು ಸಾಬೀತಾದರೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಸದ್ಯ ತನಿಖಾ ತಂಡಗಳು 130 ಮೃತದೇಹಗಳನ್ನು ಹೊರತೆಗೆದಿದ್ದು, ಇದರಲ್ಲಿ 43 ಜನರನ್ನು ಕೊಲೆ ಮಾಡಿರುವುದಾಗಿ ಹೊಗೆಲ್ ಒಪ್ಪಿಕೊಂಡಿದ್ದಾನೆ. ಇನ್ನುಳಿದವರ ಕೊಲೆ ಪ್ರಕರಣದಲ್ಲಿ ತನ್ನ ಕೈವಾಡವಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಅಂತೆಯೇ ಆತ ಕೊಲೆ ಮಾಡಿದವರ ಸಂಖ್ಯೆ ಎಷ್ಟು, ಈತ ಕೊಲೆ ಮಾಡಲು ಕಾರಣವಾದ ಅಂಶಗಳೇನು ಎಂಬುದು ಈವರೆಗೂ ನಿಗೂಢವಾಗಿ ಉಳಿದಿದೆ.

ಆಸ್ಪತ್ರೆಯ ನಿರ್ಲಕ್ಷ್ಯೇಕೆ?: ಆತ ನರ್ಸ್ ಆಗಿದ್ದ ಸಮಯದಲ್ಲಿ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದರೂ ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ಅನುಮಾನವೇ ಬರಲಿಲ್ಲವಂತೆ. ಅವನನ್ನು ರೋಗಿಗಳನ್ನು ಭೇಟಿಯಾಗದಂತೆ ತಡೆಯುವುದಾಗಲಿ, ಇನ್ನಾವುದೇ ಕ್ರಮವನ್ನು ಆಸ್ಪತ್ರೆ ಮಾಡಿಲ್ಲ. ಹೊಗೆಲ್ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೇವಲ 4 ತಿಂಗಳಲ್ಲಿ ಸಾಲು ಸಾಲು ರೋಗಿಗಳು ಸಾವನ್ನಪ್ಪಿದ್ದರು. ಆದರೂ ಆಸ್ಪತ್ರೆಗೆ ಆತನ ಬಗ್ಗೆ ಅನುಮಾನ ಮೂಡಿಲ್ಲ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ಪ್ರತಿಷ್ಟೆಗಾಗಿ ಸತ್ಯವನ್ನು ಮುಚ್ಚಿಡುವ ಪ್ರಯತ್ನವನ್ನು ಆಸ್ಪತ್ರೆ ಮಾಡುತ್ತಿದೆಯೇ ಎನ್ನುವ ಅನುಮಾನವೂ ಇದೆ.

ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಹೊಗೆಲ್: ಇಬ್ಬರ ಕೊಲೆ ಮತ್ತು ನಾಲ್ವರು ರೋಗಿಗಳ ಕೊಲೆಯಲ್ಲಿ ಕೈವಾಡವಿರುವ ಆರೋಪದಲ್ಲಿ ಹೊಗೆಲ್​ಗೆ ಈಗಾಗಲೇ ಜೈಲುಶಿಕ್ಷೆ ವಿಧಿಸಲಾಗಿದೆ. ಸದ್ಯ ಈತನ ವಿರುದ್ಧ ಆರಂಭಿಸಲಾಗಿರುವ ವಿಚಾರಣೆ 2006ರ ನಂತರದಲ್ಲಿ ನಡೆಸುತ್ತಿರುವ ಮೂರನೇ ವಿಚಾರಣೆಯಾಗಿದ್ದು, ಈ ಬಾರಿ ನೂರಕ್ಕೂ ಹೆಚ್ಚು ರೋಗಿಗಳ ಕೊಲೆ ಆರೋಪ ಎದುರಿಸುತ್ತಿದ್ದಾನೆ. ಹೊಗೆಲ್​ನೊಂದಿಗೆ ಕಾರ್ಯ ನಿರ್ವಹಿಸಿದ 8 ನರ್ಸ್​ಗಳನ್ನು ಮತ್ತೊಮ್ಮೆ ತನಿಖೆಗೆ ಒಳಪಡಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಆಸ್ಪತ್ರೆ ಒತ್ತಡಕ್ಕೆ ಮಣಿದು ಕೆಲ ಮಹತ್ವದ ಮಾಹಿತಿಗಳನ್ನು ಮುಚ್ಚಿಟ್ಟಿರುವ ಆತಂಕ ವ್ಯಕ್ತಪಡಿಸಿದೆ. ಜೂನ್​ನಲ್ಲಿ ಈ ಪ್ರಕರಣದ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.