ಹೀಗೂ ಇದ್ದರು ಒಬ್ಬ ರಾಜಕಾರಣಿ

ಭದ್ರತಾ ಸಿಬ್ಬಂದಿಯನ್ನೂ ಅವರು ಇಟ್ಟುಕೊಂಡಿರಲಿಲ್ಲ

ನವದೆಹಲಿ: ಸರಳ ವ್ಯಕ್ತಿತ್ವದ ಜಾರ್ಜ್ ಫರ್ನಾಂಡಿಸ್ ಅಲ್ಜೈಮರ್ ಕಾಯೆಲೆಗೆ ತುತ್ತಾಗುವ ತನಕವೂ ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ವೈಯಕ್ತಿಕ ಕೆಲಸಕ್ಕೆ ಪರಾವಲಂಬನೆಯನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಸಂಸತ್ತಿಗೂ ಬಹುತೇಕ ಸಲ ನಡೆದುಕೊಂಡೇ ಹೋಗುತ್ತಿದ್ದ ಜಾರ್ಜ್, ದೆಹಲಿಯ ಹೃದಯ ಭಾಗದಲ್ಲಿರುವ ಕೃಷ್ಣ ಮೆನನ್ ರಸ್ತೆಯಲ್ಲಿದ್ದ ಬಂಗಲೆಯಲ್ಲಿ ಆಪ್ತ ಅನಿಲ್ ಹೆಗಡೆ ಮತ್ತು ನೇಪಾಳದ ಅಡುಗೆ ಭಟ್ಟನೊಂದಿಗೆ ವಾಸ್ತವ್ಯ ಹೂಡಿದ್ದರು. ಉಳಿದಂತೆ ಅದೊಂದು ಎಲ್ಲರಿಗೂ ತೆರೆದುಕೊಂಡಿದ್ದ ಮನೆ ಆಗಿತ್ತು. ಯಾರು ಬೇಕಾದರೂ ಬಂದು ಹೋಗಬಹುದಿತ್ತು. ಎದುರಲ್ಲಿ ದ್ವಾರವೂ ಇರಲಿಲ್ಲ, ಭದ್ರತೆಗೆಂದು ಸೆಕ್ಯುರಿಟಿ ಗಾರ್ಡ್​ನ್ನೂ ಅವರು ಇಟ್ಟುಕೊಂಡಿರಲಿಲ್ಲ.

ಜನಪ್ರತಿನಿಧಿಯಾದವನು ಜನರ ಮಧ್ಯೆಯೇ ಬದುಕಬೇಕು. ಸೆಕ್ಯುರಿಟಿ ಗಾರ್ಡ್ ಇಟ್ಟುಕೊಳ್ಳುವವರು ತಿಹಾರ್ ಜೈಲಿನಲ್ಲಿ ಇರುವುದು ಲೇಸು ಎಂದು ಜಾರ್ಜ್ ಹೇಳುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರೂ, ತಮ್ಮ ಆಪ್ತರ ಮೂಲಕ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟನೆಗಳನ್ನು ಮಾಡಿಸುತ್ತಿದ್ದರು ಜಾರ್ಜ್. ಇದರಿಂದಾಗಿ ಆಪ್ತರ ವಿರುದ್ಧ ದಿನವೂ ದೆಹಲಿಯ ಪಾರ್ಲಿಮೆಂಟ್ ಪೊಲೀಸ್ ಸ್ಟೇಷನ್​ನಲ್ಲಿ ಕೇಸು ದಾಖಲಾಗುತ್ತಿತ್ತು. ಸೆಕ್ಯುಲರ್ ಎಂದು ಹೇಳಿಕೊಂಡು ಮಕ್ಕಳು, ಅಣ್ಣ-ತಮ್ಮಂದಿರಿಗೆ ರಾಜಕೀಯದಲ್ಲಿ ನೆಲೆ ಒದಗಿಸಿದ್ದ ಮುಲಾಯಂ ಸಿಂಗ್ ಯಾದವ್, ಲಾಲೂ ಯಾದವ್, ದೇವೇಗೌಡ ಸೇರಿದಂತೆ ಅನೇಕರ ಬಗ್ಗೆ ಅವರಿಗೆ ದಟ್ಟ ಆಕ್ರೋಶವಿತ್ತು. ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾಗ ಡೈನಾಮೈಟ್ ಮಾಡುವುದು ಹೇಗೆ ಎಂಬುದನ್ನು ಅನೇಕ ಕಾರ್ಯಕರ್ತರಿಗೆ ಹೇಳಿಕೊಟ್ಟಿದ್ದರು. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜಾರ್ಜ್ ರಕ್ಷಣೆಗೆ ನಿಂತಿದ್ದ ಜರ್ಮನಿ, ರಷ್ಯಾ ನಾಯಕರು, ಅವರಿಗೇನಾದರೂ ಹೆಚ್ಚು ಕಡಿಮೆಯಾದಲ್ಲಿ ನಾವು ಸುಮ್ಮನಿರುವುದಿಲ್ಲ ಎಂದು ಭಾರತದ ಸರ್ಕಾರವನ್ನು ಬೆದರಿಸಿದ್ದರು ಎಂದು ಆಪ್ತ ಅನಿಲ್ ಹೆಗಡೆ ನೆನಪಿಸಿಕೊಳ್ಳುತ್ತಾರೆ.

ಸಣ್ಣ ವಯಸ್ಸಿನಿಂದಲೇ ಹೋರಾಟದ ಕೆಚ್ಚನ್ನು ರೂಢಿಸಿ ಕೊಂಡಿದ್ದ ಜಾರ್ಜ್, 27ನೇ ವರ್ಷದಲ್ಲಿ ಹೊಟೇಲ್, ಟ್ಯಾಕ್ಸಿ ಡ್ರೖೆವರ್​ಗಳು, ಆಟೋವಾಲಗಳು ಸೇರಿದಂತೆ ಅಸಂಘಟಿತ ಕಾರ್ವಿುಕರ ಪರ ಮುಂಬೈನಲ್ಲಿ ದನಿಯೆತ್ತಿದ್ದರು.

ಸೋಷಿಯಲಿಸ್ಟ್ ಪಾರ್ಟಿಯಲ್ಲಿದ್ದಾಗ ಲಾಲೂ ಪ್ರಸಾದ್ ಯಾದವ್ ಭ್ರಷ್ಟಾಚಾರಗಳಿಂದ ಜಾರ್ಜ್ ಕ್ರೋಧಗೊಂಡಿದ್ದರು. ಪಕ್ಷದ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ 1991ರ ಆರ್ಥಿಕ ಉದಾರಿಕರಣದ ಬಗ್ಗೆ ರ್ಚಚಿಸುವ ಬದಲು ವೋಟು ಗಳಿಸುವ ವಿಷಯಗಳಷ್ಟೇ ಚರ್ಚೆಯಾಗುತ್ತಿದ್ದುದಕ್ಕೆ ಜಾರ್ಜ್ ಅಸಮಾಧಾನಗೊಂಡಿದ್ದರು. ಬಿಹಾರದ 54 ಸಂಸದರಲ್ಲಿ ಲಾಲೂ ಜಾತೀಯ ಕಾರಣಗಳಿಂದಾಗಿಯೇ ಬಹುಪಾಲು ಸಂಸದರು ಗೆದ್ದುಕೊಂಡಿದ್ದರಿಂದ ಲಾಲೂ ಮಾತಿಗೆ ವಿರೋಧದ ದನಿಯೂ ಕಡಿಮೆಯಿತ್ತು. ಲಾಲೂ ಬಿಹಾರ ಸಿಎಂ ಆದ ಮೇಲಂತೂ ಅಲ್ಲಿ ಭ್ರಷ್ಟಾಚಾರ ಅತಿಯಾಗಿತ್ತು. ಇದರಿಂದ ಬೇಸತ್ತ ಜಾರ್ಜ್, ಆಲ್ ಇಂಡಿಯಾ ಬಾಬರಿ ಮಸೀದಿ ಆಕ್ಷನ್ ಕಮಿಟಿ ಅಧ್ಯಕ್ಷ ಸಯ್ಯದ್ ಸಲಾಹುದ್ದಿನ್, ಅಬ್ದುಲ್ ಗಫೂರ್, ನಿತಿಶ್ ಕುಮಾರ್ ಸೇರಿ 14 ಪ್ರಮುಖ ಮುಖಂಡರೊಂದಿಗೆ ಸೋಷಿಯಲಿಸ್ಟ್ ಪಾರ್ಟಿ ತೊರೆದು 1994 ಜೂನ್ 21ರಂದು ಸಮತಾ ಪಾರ್ಟಿ ಸ್ಥಾಪಿಸಿದರು. ಸಣ್ಣಸಣ್ಣ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮತಗಳು ಹಂಚಿಹೋಗಿ ಲಾಲೂರಂಥ ರಾಜಕಾರಣಿಗಳದ್ದೇ ಆಟ ನಡೆಯುತ್ತದೆ ಎಂದು 1996ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಸೇರಲು ಜಾರ್ಜ್ ತೀರ್ವನಿಸಿದರು. ಇದಕ್ಕೂ ಮುನ್ನ ಯುನೈಟೆಡ್ ಫ್ರಂಟ್​ಗೆ ಸೇರುವ ಪ್ರಯತ್ನಗಳು ನಡೆದರೂ, ಜಾರ್ಜ್ ಬಂದರೆ ತಾನು ಮೈತ್ರಿಕೂಟ ಬಿಡುವುದಾಗಿ ಲಾಲೂ ಧಮಕಿ ಹಾಕಿದ್ದರಿಂದ ಜಾರ್ಜ್​ಗೆ ಎನ್​ಡಿಎ ಸೇರುವುದು ಅನಿವಾರ್ಯವಾಗಿತ್ತು. ಜೀವನದುದ್ದಕ್ಕೂ ತಾನು ನಂಬಿದ ತತ್ವವನ್ನೇ ಪಾಲಿಸಿ, ಭ್ರಷ್ಟಾಚಾರ, ಅಕ್ರಮಗಳ ಜತೆ ಹೊಂದಾಣಿಕೆ ಮಾಡಿಕೊಳ್ಳದ ಜಾರ್ಜ್, ರಾಜಕಾರಣಿಗಳು ಹೀಗೂ ಇರಬಹುದು ಎಂಬುದನ್ನು ತೋರಿಸಿಕೊಟ್ಟ ನಾಯಕ.

2007ರಲ್ಲಿ ಜಾರ್ಜ್​ಗೆ ಅಲ್ಜೈಮರ್ ಕಾಯಿಲೆ ಇರುವುದು ಪತ್ತೆಯಾಗಿತ್ತು. ಅಪಾರ ಸ್ಮರಣಶಕ್ತಿಯಿದ್ದ ವ್ಯಕ್ತಿಯಲ್ಲಿ ಏಕಾಏಕಿಯಾಗಿ ಮರೆವು ಹೆಚ್ಚಾಗುತ್ತಿತ್ತು. 2009ರಲ್ಲಿ ಲೋಕಸಭೆ ಚುನಾವಣೆ ಸ್ಪರ್ಧಿಸುವುದು ಬೇಡ ಎಂದು ಆಪ್ತರು ಎಷ್ಟೇ ಹೇಳಿದರೂ, ಬಾಹ್ಯ ಶಕ್ತಿಗಳ ಒತ್ತಾಯದಿಂದಾಗಿ ಬಿಹಾರದ ಮುಜಫರ್​ಪುರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಾರ್ಜ್ ರನ್ನು ಮತದಾರ ತಿರಸ್ಕರಿಸಿದ್ದ. ಅಲ್ಲಿಗೆ ಅವರ ರಾಜಕೀಯ ಜೀವನವೂ ಮುಗಿದು ಹೋಗಿತ್ತು. ನಂತರದ ದಿನಗಳಲ್ಲಿ ಎದುರಿಗಿದ್ದ ವ್ಯಕ್ತಿ ಮಾತನಾಡಿಸಿದರೂ ಪ್ರತಿಕ್ರಿಯಿಸುವ ಶಕ್ತಿ ಅವರಲ್ಲಿರಲಿಲ್ಲ. ಕಾರ್ವಿುಕ ಹೋರಾಟಗಳಲ್ಲಿ ಸಾಥಿಯಾಗಿದ್ದ ಸೋದರ ಮೈಕಲ್ ಕನ್ನಡ, ಕೊಂಕಣಿ ಭಾಷೆಯಲ್ಲಿ ಧ್ವನಿ ಏರಿಸಿದಾಗ ಜಾರ್ಜ್ ಕಣ್ಣುಗಳು ಅಲ್ಲಾಡುತ್ತಿದ್ದವಂತೆ!

ಲವ್ ಮ್ಯಾರೇಜ್

ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಹುಮಾಯುನ್ ಕಬೀರ್ ಪುತ್ರಿ ಲೈಲಾ ಕಬೀರ್ ಮತ್ತು ಜಾರ್ಜ್ ಫರ್ನಾಂಡಿಸ್ ನಡುವೆ 1971ರಲ್ಲಿ ಪ್ರೇಮಾಂಕುರವಾಗಿತ್ತು. ಬಾಂಗ್ಲಾ ದೇಶ ರಚನೆಯ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಲೈಲಾ ಕಬೀರ್ ಭಾರತದ ನಿರಾಶ್ರಿತರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬಾಂಗ್ಲಾದ ಢಾಕಾದಿಂದ ದೆಹಲಿಗೆ ಲೈಲಾ ವಿಮಾನದಲ್ಲಿ ಬರುತ್ತಿದ್ದಾಗ ಅದೇ ವಿಮಾನದಲ್ಲಿ ಜಾರ್ಜ್ ಕೂಡ ಇದ್ದರು. ಅಲ್ಲಿ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಅದೇ ವರ್ಷ ವಿವಾಹವೂ ನೆರವೇರಿತ್ತು. ಇವರ ಮಗ ಸೀನ್ ಫರ್ನಾಂಡಿಸ್ ಅಮೆರಿಕದ ನ್ಯೂಯಾರ್ಕ್​ನಲ್ಲಿ ಬ್ಯಾಂಕರ್ ಆಗಿದ್ದಾರೆ. ಅಲ್ಜೈಮರ್ ಪೀಡಿತ ಜಾರ್ಜ್​ರನ್ನು ಕೊನೆವರೆಗೂ ಲೈಲಾ ದೆಹಲಿ ಮನೆಯಲ್ಲಿ ನೋಡಿಕೊಂಡರು.

ದೇಶ ಮರೆಯದ ನಾಯಕ

ಅಪೂರ್ವವಾದ ರಾಷ್ಟ್ರಭಕ್ತಿ-ರಾಷ್ಟ್ರಪ್ರೇಮ ಮೈಗೂಡಿಸಿ ಕೊಂಡಿದ್ದ ಫರ್ನಾಂಡಿಸ್ ದೆೇಶದ ಕಾರ್ವಿುಕರು, ಸೈನಿಕರ ಜೀವನ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಪ್ರಯತ್ನ ಮಾಡಿ ದ್ದಾರೆ. ದ.ಕ. ಜಿಲ್ಲೆಯವರೇ ಆದ ಅವರು ಧರ್ಮಸ್ಥಳ ಕ್ಷೇತ್ರದ ಕುರಿತು ಅಪಾರ ಗೌರವ ಹೊಂದಿದ್ದು, ಒಮ್ಮೆ ಯಾವುದೇ ಮಾಹಿತಿ ನೀಡದೆ ಕ್ಷೇತ್ರಕ್ಕೆ ಬಂದು ಸುತ್ತಾಡಿ ಬಳಿಕ ನೇರವಾಗಿ ನನ್ನ ಬಳಿಗೆ ಬಂದು ಅಚ್ಚರಿ ಹುಟ್ಟಿಸಿದ್ದರು. ಮತ್ತೊಮ್ಮೆ 25 ವರ್ಷ ಹಿಂದೆ ಬಂಟ್ವಾಳಕ್ಕೆ ಬಂದವರು ಧರ್ಮಸ್ಥಳಕ್ಕೆ ಬರುವುದಾಗಿ ತಿಳಿಸಿ, ಕ್ಷೇತ್ರದ ಉಗ್ರಾಣದಲ್ಲಿ ಸೀಯಾಳ ಕುಡಿದು ಭೇಟಿಯಾಗಿದ್ದರು. ಅವರು ರಕ್ಷಣಾ ಸಚಿವರಾಗಿದ್ದ ವೇಳೆ ಸಿಯಾಚಿನ್ ಯೋಧರಿಗೆ ರಕ್ಷಣಾ ಇಲಾಖೆ ಭತ್ಯೆ ನೀಡದೆ ಇದ್ದಾಗ, ಅಧಿಕಾರಿಗಳೇ ಒಂದು ದಿನ ಕರ್ತವ್ಯ ನಿರ್ವಹಿಸುವಂತೆ ಎಚ್ಚರಿಕೆ ನೀಡಿ ದ್ದರು. ಅವರ ಆತ್ಮಕ್ಕೆ ಕ್ಷೇತ್ರದ ವತಿಯಿಂದ ಗೌರವ ಸಲ್ಲಿಸುತ್ತಿದ್ದೇನೆ ಮತ್ತು ದೇಶವೂ ಕೂಡ ಅವರನ್ನು ಮರೆಯದು.

| ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ

ನಾಡಿನ ಶರಣರ ಬಗ್ಗೆ ತಿಳಿದುಕೊಂಡಿದ್ದರಲ್ಲದೇ ಬಸವಣ್ಣನವರ ತತ್ವಾದರ್ಶಗಳನ್ನು ಜಾರ್ಜ್ ಅವರು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದರು. ಮಠದ ಜೊತೆಗೆ ಅಪೂರ್ವ ಬಾಂಧವ್ಯ ಹೊಂದಿದ್ದ ಅವರು ಈ ಭಾಗಕ್ಕೆ ಬಂದಾಗ ಭೇಟಿ ನೀಡುತ್ತಿದ್ದರು. ರಕ್ಷಣೆಯಂತ ಮಹತ್ತರ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ದೇಶಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದದ್ದು.

| ಡಾ. ತೋಂಟದ ಸಿದ್ಧರಾಮ ಶ್ರೀಗಳು ನಾಗನೂರು ಶ್ರೀ ರುದ್ರಾಕ್ಷಿ ಮಠ, ಬೆಳಗಾವಿ

1977ರಲ್ಲೆ ಎಂಎನ್​ಸಿ ಕಂಪನಿ ಗಳ ಅಪಾಯ ಮನಗಂಡು ದೇಸಿ ಉತ್ಪನ್ನ ಬಳಕೆಗೆ ಆಗ್ರಹಿಸಿದ್ದರು. ಜಾರ್ಜ್ ರಾಜಕೀಯದಲ್ಲಿ ನನಗೆ ಸಹಾಯ ಮಾಡಿದ ವ್ಯಕ್ತಿ. ನನ್ನ ಗುರುಗಳ ಸಮಾನ. ಅವರ ನಿಧನ ಆಘಾತ ತಂದಿದೆ.

| ಸಿದ್ದರಾಮಯ್ಯ ಮಾಜಿ ಸಿಎಂ

ಜಾರ್ಜ್ ಫರ್ನಾಂಡಿಸ್ ಅವರು ಮಹತ್ವದ ಸಮಾಜವಾದಿಯಾಗಿದ್ದ ರಲ್ಲದೆ ರಾಜಕೀಯ ಕ್ಷೇತ್ರದ ಪ್ರಮುಖರಾಗಿದ್ದರು. ಕೊಂಕಣ ರೈಲ್ವೆ ಯೋಜನೆಯ ಹಿಂದಿನ ಶಕ್ತಿಯಾಗಿದ್ದರು. ಈ ಯೋಜನೆಗೆ ನೀಡಿದ ಕೊಡುಗೆಗಾಗಿ ರಾಜ್ಯದ ಜನತೆ ಅವರನ್ನು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

| ಎಚ್.ಡಿ. ಕುಮಾರಸ್ವಾಮಿ ಸಿಎಂ