ವಿದ್ಯುತ್ ಇಲ್ಲದೆ ನಗರಸಭೆ ಕಂಪ್ಯೂಟರ್ ಸ್ಥಬ್ಧ

ಚಿಕ್ಕಮಗಳೂರು: ನಗರದಲ್ಲಿ ನಿತ್ಯ ನಿರಂತರವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಮಂಗಳವಾರ ನಗರಸಭೆ ಕತ್ತಲ ಕೂಪವಾಗಿ ನಾಗರಿಕರು ವಿವಿಧ ದಾಖಲೆ, ಪ್ರಮಾಣ ಪತ್ರಗಳಿಗೆ ಪರದಾಡುವಂತಾಗಿ ಅಧಿಕಾರಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು.

ನಗರದಲ್ಲಿ ಹಲವು ದಿನಗಳಿಂದ ಆಗಿಂದಾಗ್ಗೆ ವಿದ್ಯುತ್ ಸ್ಥಗಿತಗೊಳ್ಳುತ್ತಿದೆ. ಪರಿಣಾಮವಾಗಿ ಮಹಿಳೆಯರು ಆಹಾರ ತಯಾರಿಸಲಾಗದೆ ಸಮಸ್ಯೆ ಅನುಭವಿಸುವುದರ ಜತೆಗೆ ಮೆಸ್ಕಾಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಂದು ದಿನಗಳಲ್ಲಿ ಬೆಳಗ್ಗೆ 9 ಗಂಟೆಗೆ ಕಡಿತಗೊಂಡಿದ್ದ ವಿದ್ಯುತ್ ಮಧ್ಯಾಹ್ನವಾದರೂ ಬಾರದೆ ಇದ್ದಿದ್ದೂ ಇದೆ.

ಯಾಂತ್ರಿಕ ಬದುಕಿಗೆ ಕಾಲಿಟ್ಟಿರುವ ಮನೆಗಳಲ್ಲಿ ಮಕ್ಕಳಿಗೆ ತಿಂಡಿ, ಊಟ ತಯಾರಿಸಲು ಮಿಕ್ಸಿಗಳು ತಿರುಗದಿರುವ ಕಾರಣ ಅಡುಗೆ ಸಿದ್ಧವಾಗದೆ ಸಮಸ್ಯೆ ಅನುಭವಿಸಬೇಕಾದ ದುಸ್ಥಿತಿ ಇದೆ.

ಮಂಗಳವಾರ ಸಹ ಬೆಳಗ್ಗೆ 10 ಗಂಟೆಯಿಂದ ವಿದ್ಯುತ್ ಸ್ಥಗಿತಗೊಂಡ ಕಾರಣ ನಗರಸಭೆ ಸಂಪೂರ್ಣ ಕತ್ತಲಲ್ಲಿ ಕೈಕಟ್ಟಿ ಕೂರಬೇಕಾಯಿತು. ಮಧ್ಯಾಹ್ನ ನಗರಸಭೆಗೆ ನಾಗರಿಕರು ಜನನ-ಮರಣ ಪ್ರಮಾಣಪತ್ರ ಹಾಗೂ ಖಾತೆ ಇತ್ಯಾದಿ ದಾಖಲೆ ಪತ್ರಗಳನ್ನು ಪಡೆಯಲು ತೆರಳಿದವರು ಕಾದು ಸುಸ್ತಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಪಿಸುತ್ತ ಹಿಂತಿರುಗಿದರು.

ನಗರದಲ್ಲಿ ವಿದ್ಯುತ್ ಸಮಸ್ಯೆಯಾದರೆ, ಈ ನಗರಸಭೆಯಲ್ಲಿ ಜನರೇಟರ್ ಸಮಸ್ಯೆಯಿಂದ ಯಾವುದೇ ಪತ್ರಗಳನ್ನು ನೀಡಲು ಆಗದ ಪರಿಸ್ಥಿತಿಯಲ್ಲಿ ಸ್ಥಗಿತಗೊಂಡಿದ್ದ ಕಂಪ್ಯೂಟರ್​ಗಳ ಮುಂದೆ ಕೆಲಸಗಾರರು ಕೈಕಟ್ಟಿ ಕೂರುವ ಸ್ಥಿತಿ ಇತ್ತು. ಮರಣ ಪ್ರಮಾಣಪತ್ರಕ್ಕಾಗಿ ಆಗಮಿಸಿದ್ದ ಕೆಲವರಂತೂ ತಮ್ಮ ಸಿಟ್ಟನ್ನೆಲ್ಲ ನೌಕರರ ಮೇಲೆ ತೀರಿಸಿಕೊಂಡರು.

ಈ ವಿದ್ಯುತ್ ಶಾಕ್ ಜಿಲ್ಲಾಧಿಕಾರಿ ಕಚೇರಿಯನ್ನೂ ಬಿಟ್ಟಿಲ್ಲ. ಒಟ್ಟಾರೆ ವಿದ್ಯುತ್ ಕಡಿತ ಸಮಸ್ಯೆಯಿಂದ ಸಾಮಾನ್ಯ ನಾಗರಿಕರಂತೂ ನಿತ್ಯ ನರಳಾಡುವುದಂತೂ ತಪ್ಪಿಲ್ಲ.

ಹಲವು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಈ ಬಗ್ಗೆ ಸರ್ಕಾರಿ ಕಚೇರಿಗಳಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಆದರೆ ಸಾರ್ವಜನಿಕರಿಗೆ ನಿತ್ಯ ಸಂಪರ್ಕವಿರುವ ತಾಲೂಕು ಕಚೇರಿ, ನಗರಸಭೆ, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸೂಕ್ತ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳದಿರುವುದು ದುರದೃಷ್ಟಕರ. ಸಮಯಕ್ಕೆ ಸರಿಯಾಗಿ ತೆರಿಗೆ ವಸೂಲಿ ಮಾಡುವ ಇಲಾಖೆಗಳಲ್ಲಿ ಅದೇ ರೀತಿ ನಾಗರಿಕ ಸೌಲಭ್ಯ ಒದಗಿಸಬೇಕೆಂಬ ಪರಿಜ್ಞಾನ ಇರಬೇಕು.

| ಚೇತನ್, ಕೆಂಪನಹಳ್ಳಿ