ಸಾಮಾನ್ಯ ಬೋಗಿಯಲ್ಲಿ ಸಂಚರಿಸಲು ಅಧಿಕಾರಿಗಳಿಗೆ ಸೂಚನೆ

ನವದೆಹಲಿ: ರೈಲ್ವೆ ಇಲಾಖೆ ಅಧಿಕಾರಿಗಳು ಸಾಮಾನ್ಯ ಬೋಗಿಯಲ್ಲಿಯೂ ಸಂಚರಿಸಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಸೂಚಿಸಿದ್ದಾರೆ.

ಇಲಾಖಾ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆಳಗಾವಿ ಸಂಸದರೂ ಆಗಿರುವ ಅಂಗಡಿ, ಸಾಮಾನ್ಯ ಪ್ರಯಾಣಿಕರ ಅಭಿಪ್ರಾಯಗಳಿಗೆ ಅಧಿಕಾರಿಗಳು ಮನ್ನಣೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಬೋಗಿಗಳಲ್ಲೂ ಅಧಿಕಾರಿಗಳು ಪ್ರಯಾಣಿಸಬೇಕು. ಅಲ್ಲಿನ ಆಹಾರದ ಗುಣಮಟ್ಟ, ಶೌಚಗೃಹ, ಸ್ವಚ್ಛತೆ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ಪಡೆದು ನಿರಂತರವಾಗಿ ವರದಿ ತಯಾರಿಸಬೇಕು.

ರೈಲ್ವೆಯು ಅತಿ ಬಡ ಜನರ ಸುಖಕರ ಪ್ರಯಾಣಕ್ಕೆ ಅನುವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ನಿರ್ದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ ರೈಲ್ವೆ ಇಲಾಖೆಯ ಅಧಿಕೃತ ಸಭೆ ಹಾಗೂ ಪ್ರಯಾಣಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ರೈಲುಗಳನ್ನೇ ಬಳಸಬೇಕು. ಅದರಿಂದ ಇಲಾಖೆಯಲ್ಲಿ ಶಿಸ್ತು ಹಾಗೂ ವೃತ್ತಿಪರತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಚಿವರು ಸೂಚಿಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೂಡ ಹಾಜರಿದ್ದರು.

Leave a Reply

Your email address will not be published. Required fields are marked *