ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ; ಎಡ ರಂಗದ ಅಭ್ಯರ್ಥಿ ಎಂ ಡಿ ಸಲೀಂ ಕಾರಿನ ಮೇಲೆ ಕಲ್ಲು ತೂರಾಟ

ಕೋಲ್ಕತಾ: ದೇಶದ ಹಲವೆಡೆ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳವು ಕೆಲ ದಾಳಿಗಳಿಗೆ ಸಾಕ್ಷಿಯಾಗಿದ್ದು, ಅಭ್ಯರ್ಥಿಯೊಬ್ಬರ ಕಾರಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಸಿಪಿಎಂ ಅಭ್ಯರ್ಥಿ ಮೊಹಮ್ಮದ್‌ ಸಲಿಮ್‌ ರಾಯ್‌ಗುಂಜ್‌ ಲೋಕಸಭಾ ಕ್ಷೇತ್ರದ ಪಟಗೋರಾದಲ್ಲಿ ತಮ್ಮ ಮತ ಚಲಾಯಿಸಲು ತೆರಳುತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಸದ್ಯದ ಕಾಂಗ್ರೆಸ್‌ ಸಂಸದೆ ದೀಪಾ ದಸಮುನ್ಸಿ ಅವರ ವಿರುದ್ಧ ಸ್ಪರ್ಧಿಸಿದ್ದಾರೆ. ಇದಕ್ಕೂ ಮುನ್ನ ದೀಪಾ ಅವರ ಪತಿ ಪ್ರಿಯರಂಜನ್‌ ದಸಮುನ್ಸಿ ಅವರು 1999ರಿಂದಲೂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ಗಿರ್‌ಪುರ ಮತಗಟ್ಟೆಯ ಬಳಿಯೂ ಹಿಂಸಾಚಾರ ನಡೆದಿದ್ದು, ತಮ್ಮ ಮತ ಚಲಾಯಿಸಲು ದುಷ್ಕರ್ಮಿಗಳು ತಡೆದಿದ್ದಾರೆ ಅಲ್ಲದೆ ಪೊಲೀಸರು ಕೂಡ ತಮ್ಮನ್ನು ಮತ ಚಲಾಯಿಸದಂತೆ ತಡೆದು ಕಳುಹಿಸಿದ್ದಾರೆ ಎಂದು ಆರೋಪಿಸಿ ಮತದಾರರು ರಾಷ್ಟ್ರೀಯ ಹೆದ್ದಾರಿ 34 ರನ್ನು ತಡೆದಿದ್ದಾರೆ.

ಮತ ಚಲಾಯಿಸಲು ಬಿಟ್ಟಿಲ್ಲ ಎಂದು ಆರೋಪಿಸಿ ಡಾರ್ಜಲಿಂಗ್‌ ಕ್ಷೇತ್ರದ ಚೋಪ್ರಾದಲ್ಲೂ ಮತ್ತೊಂದು ಗುಂಪು ರಾಷ್ಟ್ರೀಯ ಹೆದ್ದಾರಿ 31ನ್ನು ತಡೆದಿದ್ದಾರೆ. ಪೊಲೀಸರು ಲಾಟಿ ಚಾರ್ಜ್‌, ಅಶ್ರುವಾಯು ಮತ್ತು ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ್ದಾರೆ. ಸದ್ಯ ಸ್ಥಳಕ್ಕೆ ಕೇಂದ್ರ ಪಡೆಯು ಆಗಮಿಸಿದೆ.

ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಪಶ್ಚಿಮ ಬಂಗಾಳದ ಮೂರು ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಡಾರ್ಜಲಿಂಗ್ ಮತ್ತು ರಾಯ್‌ಗಂಜ್‌ ಜತೆಗೆ ಜಲ್ಪೈಗುರಿ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *