ಯಾರಾಗಲಿದ್ದಾರೆ ರಾಜಸ್ಥಾನದ ಮುಖ್ಯಮಂತ್ರಿ? ದೆಹಲಿಗೆ ತೆರಳಿದ ಪೈಲಟ್‌, ಗೆಹ್ಲೋಟ್‌

ಜೈಪುರ: ರಾಜಸ್ಥಾನದ ವಿಧಾನಸಭೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದ್ದರೂ ಸಿಎಂ ಅಭ್ಯರ್ಥಿ ಯಾರು ಎಂಬುದು ಇನ್ನು ಬರೆಹರಿದಿಲ್ಲ. ಈ ಬೆನ್ನಲ್ಲೇ ಇಂದು ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್‌ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

199 ವಿಧಾನಸಭಾ ಕ್ಷೇತ್ರಗಳಿರುವ ರಾಜಸ್ಥಾನದಲ್ಲಿ 99 ಸೀಟುಗಳನ್ನು ಪಡೆದು ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಹೊರಹೊಮ್ಮಿದ್ದು, ರಾಹುಲ್‌ ಗಾಂಧಿ ಭೇಟಿ ಬಳಿಕ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಇನ್ನು ಈ ಕುರಿತು ಬುಧವಾರ ಮಾತನಾಡಿದ್ದ ಕಾಂಗ್ರೆಸ್‌ ಪ್ರದೇಶ ಕಮಿಟಿ ಅಧ್ಯಕ್ಷ ಸಚಿನ್‌ ಪೈಲಟ್‌, ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ಮತ್ತು ಇತರೆ ನಾಯಕರ ಸಭೆ ಬಳಿಕ ಮುಖ್ಯಮಂತ್ರಿ ಯಾರು ಎನ್ನುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಹುಲ್‌ ಗಾಂಧಿ ಮತ್ತು ಪಕ್ಷದ ನಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಗುರುವಾರ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಹೇಳಿದ್ದರು. (ಏಜೆನ್ಸೀಸ್)