Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಸಾಮಾನ್ಯ ಪ್ರಜ್ಞೆ – ಸ್ವಧರ್ಮ

Thursday, 14.06.2018, 3:03 AM       No Comments

|ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

ಆತ್ಮಜ್ಞಾನ ಪಡೆದವನ ಮನಸ್ಸು ಶುಭ್ರವಾದ ಕನ್ನಡಿಯಂತಿರುವುದು. ಸ್ವಲ್ಪ ಬೆಳಕು ಬಿದ್ದರೂ ಅದು ಪ್ರತಿಫಲಿಸುವುದು. ಹಾಗೆಯೇ ಅವನ ಅಂತಃಕರಣದಲ್ಲಿ ಆತ್ಮಜ್ಞಾನ ಪ್ರತಿಫಲಿಸುವುದು. ಇದು ಸಾಧ್ಯವಾಗುವುದು ಸಮಾಧಿಯ ಅವಸ್ಥೆಯಲ್ಲಿ. ಶಮ, ದಮಾದಿ ಸಾಧನೆಗಳನ್ನು ಮಾಡಿರುವ ಆತನಿಗೆ ಇದು ಕಡೆಯ ಜನ್ಮ. ಇಂಥವನು ಲಕ್ಷಕ್ಕೆ ಒಬ್ಬ. ಶ್ರೀರಾಮಕೃಷ್ಣ ಪರಮಹಂಸರು ‘ನಮಗೆ ಸಾಧನೆಗಾಗಿ ಇರುವುದು ಮನಸ್ಸು ಒಂದೇ. ಮನಸ್ಸಿನಿಂದಲೇ ಸಾಕ್ಷಾತ್ಕಾರ ಸಾಧ್ಯ’ ಎನ್ನುವರು. ಶಾಸ್ತ್ರಗಳು ‘ಅಶುದ್ಧ ಮನಸ್ಸಿನಿಂದ ಸಾಕ್ಷಾತ್ಕಾರ ಸಾಧ್ಯವಿಲ್ಲ’ ಎನ್ನುತ್ತವೆ. ‘ಮನಸ್ಸು ಸಂಪೂರ್ಣವಾಗಿ ಪರಿಶುದ್ಧವಾದಾಗ ಮನಸ್ಸೇ ಆತ್ಮವಾಗುವುದು’ ಎನ್ನುವರು ಶ್ರೀರಾಮಕೃಷ್ಣ ಪರಮಹಂಸರು. ಶುದ್ಧಮನಸ್ಸಿನಲ್ಲಿ ಆತ್ಮವಸ್ತು ಪ್ರತಿಫಲಿಸಿದಾಗ ಎರಡನೆಯ ವಸ್ತುವೇ ಕಾಣಿಸದು. ಆತ್ಮಜ್ಞಾನ ಪಡೆಯಲು ನಾವು ಮುಖ್ಯವಾಗಿ ಮಾಡಬೇಕಾದದ್ದು ಮನಸ್ಸಿನ ಶುದ್ಧೀಕರಣ. ಇದಕ್ಕಾಗಿ ಅಧ್ಯಾತ್ಮವಿದ್ಯೆ ಹೇಳುವ ಸಾಧನಚತುಷ್ಟಯ ಶ್ರವಣ, ಮನನ ಇತ್ಯಾದಿ ಅಭ್ಯಾಸ ಮಾಡುತ್ತ ಸಾಧನೆಯಲ್ಲಿ ತೊಡಗಿ ಮನಸ್ಸು ಶುದ್ಧವಾದಾಗ ಒಳಗಿನಿಂದ ಆತ್ಮಜ್ಞಾನ ಒಮ್ಮೆಗೆ ಬರುವುದು.

ಶ್ರೀಕೃಷ್ಣ, ‘ಅರ್ಜುನ, ನಾವು ಕಣ್ಣೆದುರು ನೋಡುತ್ತಿರುವ ಪ್ರತಿಯೊಬ್ಬರಲ್ಲಿಯೂ (ಭೀಷ್ಮ-ದ್ರೋಣರಲ್ಲಿಯೂ ಎಂಬ ಭಾವ) ಒಬ್ಬ ದೇಹಿ (ಆತ್ಮ) ಇರುವನು. ಇವನೇ ದೇಹವನ್ನು ತನ್ನದಾಗಿರಿಸಿಕೊಂಡು ತಾತ್ಕಾಲಿಕವಾಗಿ ವಾಸ ಮಾಡುತ್ತಿರುವ ಆತ್ಮವಸ್ತು. ತ್ರಿಕಾಲಾಬಾಧಿತನಾದ ಇವನು ಸದಾ ಇರುವನು. ಇವನೆಂದಿಗೂ ನಾಶವಾಗುವುದಿಲ್ಲ. ಇವನನ್ನು ನಾಶಪಡಿಸಲು ಸಾಧ್ಯವಿಲ್ಲ. ಆದ್ದರಿಂದ ನೀನು ಎಲ್ಲಾ ಪ್ರಾಣಿಗಳನ್ನು ಕುರಿತು ಶೋಕಿಸಬಾರದು’ (ದೇಹೀ ನಿತ್ಯಂ ಅವಧ್ಯೋಯಂ… ಭ.ಗೀ.: 2.30) ಎನ್ನುವನು.

ಇಲ್ಲಿ ಅರ್ಜುನ ಇತರರಿಗಾಗಿ ಶೋಕಿಸದೆ, ತಾತ ಭೀಷ್ಮ ಹಾಗೂ ಗುರು ದ್ರೋಣರನ್ನು ಯುದ್ಧದಲ್ಲಿ ಕೊಲ್ಲಬೇಕೆಂದು ಶೋಕಿಸುತ್ತಿದ್ದಾನೆ. ಭೀಷ್ಮ-ದ್ರೋಣರೂ ಶರೀರದಿಂದ ಭಿನ್ನವಾದ ಆತ್ಮವಸ್ತುವೆಂಬ ಅರಿವು ಅರ್ಜುನನಲ್ಲಿಲ್ಲ. ಕೊಲ್ಲುತ್ತಿರುವೆ, ಕೊಲ್ಲಲ್ಪಡುತ್ತಿರುವೆ ಎಂಬ ಭಾವನೆಗಳೇ ಸರಿಯಲ್ಲ. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು, ಕಲ್ಲು, ಮಣ್ಣು ಚರಾಚರ ವಸ್ತುಗಳಲ್ಲಿಯೂ ಆತ್ಮವಸ್ತುವಿದೆ. ಒಂದೇ ಆತ್ಮವಸ್ತು ಅನೇಕ ರೀತಿಯಲ್ಲಿ ಅಭಿವ್ಯಕ್ತವಾಗುತ್ತಿದೆ. ಇದೆಲ್ಲವನ್ನು ತಿಳಿದು ಅರ್ಜುನನು ಶೋಕವನ್ನು ತ್ಯಜಿಸಬೇಕು ಎನ್ನುತ್ತಿದ್ದಾನೆ ಶ್ರೀಕೃಷ್ಣ.

ಇದುವರೆಗೂ ಶ್ರೀಕೃಷ್ಣ ಪರಮಾತ್ಮ ತತ್ತ್ವ, ದರ್ಶನಶಾಸ್ತ್ರ ಹಾಗೂ ವೇದಾಂತಗಳನ್ನು ತಿಳಿಸಿದ. ಈಗವನು ಸಾಮಾನ್ಯಪ್ರಜ್ಞೆ – ಸ್ವಧರ್ಮದ ದೃಷ್ಟಿಯಿಂದ ತಿಳಿಸುವಾಗಲೂ ಅರ್ಜುನನು ಶೋಕಪಡುವುದು ಸರಿಯಲ್ಲ, ಯುದ್ಧವೇ ಅವನ ಕರ್ತವ್ಯ ಎನ್ನುವನು. ಶ್ರೀಕೃಷ್ಣ, ‘ಅರ್ಜುನ, ನಿನ್ನ ಸ್ವಧರ್ಮದ ದೃಷ್ಟಿಯಿಂದ ಪರೀಕ್ಷಿಸಿ ನೋಡಿದರೂ ನೀನು ದುಃಖ, ಶೋಕಗಳಿಂದ ನಡುಗಿ ಭಯಪಡುತ್ತಿರುವುದು ಸರಿಯಲ್ಲ. ಏಕೆಂದರೆ, ಕ್ಷತ್ರಿಯನಾದವನಿಗೆ ಶ್ರೇಯಸ್ಕರವಾದ ದಾರಿ, ಅವಕಾಶ ಮತ್ತೊಂದಿಲ್ಲ’ (ಸ್ವಧರ್ಮಮಪಿ ಚಾವೇಕ್ಷ್ಯ… ಭ.ಗೀ. : 2.31) ಎನ್ನುವನು. ‘ಸ್ವಧರ್ಮ’ ಶಬ್ದ ಭಗವದ್ಗೀತೆಯಲ್ಲಿ ಅನೇಕ ಸ್ಥಾನಗಳಲ್ಲಿ ಬಂದಿದೆ. ನಾವು ಹುಟ್ಟಿ ಬೆಳೆದಿರುವ ಧರ್ಮ ತೊರೆದು ಬೇರೆ ಧರ್ಮಕ್ಕೆ ಸೇರಬಾರದು. ‘ಸ್ವಧರ್ಮ’ ಎಂದರೆ ನಮ್ಮ ಮೂಲಸ್ವಭಾವವೂ ಹೌದು. ಇದಕ್ಕೆ ವಿರುದ್ಧವಾಗಿಯೂ ಹೋಗಬಾರದು. ದೈಹಿಕವಾಗಿ ದುರ್ಬಲನಾಗಿ, ಬುದ್ಧಿವಂತನಾಗಿದ್ದರೂ ಅವನು ಸೇನೆಗೆ ಸೇರಲಾಗದು. ಏಕೆಂದರೆ ಅದು ಅವನ ಸ್ವಧರ್ಮವಲ್ಲ. ಬೇಕಾದರೆ ಅವನು ತತ್ತ್ವಶಾಸ್ತ್ರ ಪ್ರಾಧ್ಯಾಪಕನಾಗಬಹುದು. ಅದು ಅವನ ಸ್ವಧರ್ಮ. ಸದೃಢ ಶರೀರದವನು ಸೇನೆ ಸೇರಬಹುದು. ನಮ್ಮ ಸ್ವಭಾವಕ್ಕೆ ತಕ್ಕಂತಹ ವಿವೇಕದ ಮಾರ್ಗದಲ್ಲಿರುವುದೇ ‘ಸ್ವಧರ್ಮ’.

ಸ್ವಾಮಿ ತ್ಯಾಗೀಶಾನಂದರು””Remember, Swadharma must first be Dharma.” (ನೆನಪಿಡು, ಸ್ವಧರ್ಮವು ಮೊದಲ ಧರ್ಮವಾಗಬೇಕು) ಎನ್ನುತ್ತಿದ್ದರು. ‘ಸ್ವ’ ಮತ್ತು ‘ಧರ್ಮ’ ಎಂಬ ಎರಡು ಪದಗಳಲ್ಲಿ ‘ಧರ್ಮ’ ಎಂಬುದು ಮೂಲವಸ್ತು. ಅದನ್ನು ನಾವು ನಮ್ಮದನ್ನಾಗಿ ಮಾಡಿಕೊಂಡಾಗ ಅದು ‘ಸ್ವಧರ್ಮ’ ಆಗುವುದು. ವಿಶಾಲವಾದ ಧರ್ಮದಲ್ಲಿ ಒಂದು ಭಾಗವನ್ನು ಆರಿಸಿಕೊಂಡು ನನ್ನ ಜೀವನಕ್ಕೆ ಅಳವಡಿಸಿಕೊಂಡಾಗ ಅದು ನನಗೆ ಸ್ವಧರ್ಮವಾಗುವುದು. ಉದಾಹರಣೆಗೆ ‘ಅಹಿಂಸೆ’ – ಇದು ಸಾಮಾನ್ಯ ನಿಯಮ. ಇದು ಮುಖ್ಯವಾಗಿ ಬ್ರಾಹ್ಮಣರಿಗೆ, ಸಂನ್ಯಾಸಿಗಳಿಗೆ ಅನ್ವಯಿಸುವುದೇ ಹೊರತು ಕ್ಷತ್ರಿಯರಿಗಲ್ಲ. ಅಹಿಂಸೆ ಕ್ಷತ್ರಿಯರಿಗೆ ಸ್ವಧರ್ಮವಾಗದಿದ್ದರೂ, ಇಪ್ಪತ್ತನಾಲ್ಕು ಘಂಟೆ ಅಹಿಂಸೆಯಲ್ಲ, ಅದನ್ನು ವಿವೇಕದಿಂದ ಸಂದರ್ಭ ತಿಳಿದು ಆಚರಿಸಬೇಕು.

ಧರ್ಮವನ್ನು ಮಾತ್ರ ಸ್ವಧರ್ಮ ಮಾಡಿಕೊಳ್ಳಲು ಸಾಧ್ಯ. ಎಲ್ಲ ಸಂದರ್ಭದಲ್ಲಿಯೂ ಧರ್ಮರಕ್ಷಣೆ ಮಾಡುವುದೇ ಕ್ಷತ್ರಿಯನಾದ ಅರ್ಜುನನ ಸ್ವಧರ್ಮ. ರಾಜನು ತನ್ನ ಸ್ವಧರ್ಮವನ್ನು ಸದಾ ಅವಲಂಬಿಸಿದ್ದಾಗ ಮಾತ್ರ ಸಮಾಜ ಸದೃಢವಾಗಿ, ಸುಖದಿಂದಿರಲು ಸಾಧ್ಯ. ಅರ್ಥಾತ್ ಸಮಾಜದಲ್ಲಿ ಎಲ್ಲೆಡೆ ಧರ್ಮವಿರಬೇಕು. ಹೀಗಾಗಿ ಧರ್ಮವನ್ನು ಕಾಪಾಡುವುದು ಕರ್ತವ್ಯ. ಕ್ಷತ್ರಿಯನು ಧರ್ವಿುಷ್ಠರನ್ನು ಕಾಪಾಡುವುದರ ಮೂಲಕ ಧರ್ಮವನ್ನು ಕಾಪಾಡಬೇಕು. ಧರ್ಮದ ಕಲ್ಪನೆ ನಮಗೆ ತಿಳಿಯದು. ಧರ್ವಿುಷ್ಠರನ್ನು ನೋಡುವುದರಿಂದ ಧರ್ಮ ತಿಳಿಯುವುದು. ಸುಳ್ಳು ಹೇಳದ, ಸತ್ಯಕ್ಕಾಗಿ ಕಷ್ಟ ಸಹಿಸುವವರನ್ನು ನೋಡಿ ನಮಗೆ ‘ಸತ್ಯ’ ತಿಳಿಯುವುದು. ಅರ್ಥಾತ್ ಕ್ಷತ್ರಿಯನ ಮುಖ್ಯ ಕರ್ತವ್ಯ ಧರ್ಮರಕ್ಷಣೆ. ಎಂದರೆ ಧರ್ಮವನ್ನು ಅರಿತು, ಜೀವನದಲ್ಲಿ ಆಚರಿಸುವುದರ ಮೂಲಕ ನಾಲ್ಕು ಜನರಿಗೆ ಧರ್ಮ ತಿಳಿಸಿ ಮಾದರಿಯಾಗಿರುವ ಸತ್ಪುರುಷರನ್ನು ಕಾಪಾಡುವುದು.

ಈ ಲೋಕದಲ್ಲಿ ದುಷ್ಟರು ಸತ್ಪುರುಷರಿಗೆ ಧರ್ಮವನ್ನು ಅವಲಂಬಿಸಿ ಜೀವನ ನಡೆಸಲು ಅವಕಾಶ ಕೊಡುವುದಿಲ್ಲ. ಅವರಿಗೆ ಈ ಸತ್ಪುರುಷರು ಅಧರ್ಮದ ಹಾದಿಯಲ್ಲಿನ ಮುಳ್ಳಿನಂತೆ. ಇಂತಹ ಸಂದರ್ಭಗಳಲ್ಲಿ ಕ್ಷತ್ರಿಯನು ದುಷ್ಟನಾಗಿ, ಕೆಟ್ಟ ಕೆಲಸ ಮಾಡುವ ಅಧರ್ವಿುಗಳನ್ನು ಸೆರೆಹಿಡಿದೋ ಅಥವಾ ಸಂಹರಿಸಿಯೋ ನಿಗ್ರಹಿಸಬೇಕು. ದುಷ್ಟ ಶಿಕ್ಷಣೆಯ ಮೂಲಕ ಶಿಷ್ಟರಿಗೆ ರಕ್ಷಣೆ ಕೊಟ್ಟಾಗ ಧರ್ಮವು ರಕ್ಷಿತವಾಗುವುದು. ಇದೇ ಕ್ಷತ್ರಿಯ ಕರ್ತವ್ಯ. ಸ್ವಧರ್ಮದ ದೃಷ್ಟಿಯಿಂದಲೂ ಅರ್ಜುನ ಯುದ್ಧ ಮಾಡಲೇಬೇಕು. ಬೇರೆ ಉಪಾಯವಿರದೆ, ಯುದ್ಧವೇ ಅನಿವಾರ್ಯವೆಂಬ ಸಂದರ್ಭ ಬಂದಿದೆ. ಈ ಧರ್ಮಯುದ್ಧವೊಂದೇ ಕ್ಷತ್ರಿಯನಿಗೆ ಶ್ರೇಯಸ್ಸು ತರುವುದು. ಈ ಸುವರ್ಣಾವಕಾಶ ಅರ್ಜುನನಿಗೆ ಒದಗಿದೆ. ಧರ್ಮಯುದ್ಧ ತಾನಾಗಿಯೇ

ಕೈ ಬೀಸಿ ಕರೆಯುತ್ತಿದೆ. ಸತ್ಪುರುಷರನ್ನು ಕೊಲ್ಲುವುದು ಮಹಾಪಾಪ. ಹಾಗೆಯೇ ಹತರಾಗಲು ಯೋಗ್ಯರಾದ ಆತತಾಯಿಗಳನ್ನು, ಧರ್ಮವಿರೋಧಿ ದುಷ್ಟರನ್ನು ಬಿಡುವುದೂ ಮಹಾಪಾಪ. ಹೀಗಾಗಿ ದುಷ್ಟರನ್ನು ಕೊಲ್ಲುವುದು ಕರ್ತವ್ಯ.

ಹಿಂದೆ ಕೆಲವು ಯಾಗಗಳಲ್ಲಿ ಮಾತ್ರ ಇದ್ದ ಪ್ರಾಣಿಬಲಿಯಲ್ಲಿಯೂ ಒಂದು ಕ್ರಮವಿತ್ತು. ಪ್ರಾಣಿಗಳಲ್ಲಿ ಕೆಲವು ಬಿಂದುಗಳನ್ನು ಗುರುತಿಸಿ, ಅವುಗಳನ್ನು ಒತ್ತಿ ಹಿಂಸೆಯಾಗದಂತೆ ಶಾಂತವಾಗಿ ಸಾಯಿಸುತ್ತಿದ್ದರು. ನಂತರ ಕತ್ತರಿಸಿ ಯಜ್ಞದಲ್ಲಿ ಉಪಯೋಗಿಸುತ್ತಿದ್ದರು. ಇದು ಬಹಳ ಅಪರೂಪವಾಗಿತ್ತು. ಅಹಿಂಸೆ ಪಾಲಿಸುವ ಯಾಗ ಮಾಡುವವನಿಗೆ ಹಿಂಸೆಯೆಂಬ ಚಿಂತೆಯಾದರೂ ಅವನು ಇದನ್ನು ‘ಸ್ವಧರ್ಮ’ ಎಂದು ಭಾವಿಸಬೇಕು. ಸಾಮಾನ್ಯ ಧರ್ಮ ಅಹಿಂಸೆ. ಅದರೊಳಗೆ ಯಜ್ಞ, ಯಾಗಗಳೆಂಬ ‘ಸ್ವಧರ್ಮ’ ಬಂದಿದೆ, ಇಲ್ಲಿ ಹಿಂಸೆ ಅಪವಾದ. ಶ್ರೀಶಂಕರಾಚಾರ್ಯರು ಇದನ್ನು ನಿಲ್ಲಿಸಿದರು. ಶ್ರೀಮಧ್ವಾಚಾರ್ಯರು ಹಿಟ್ಟಿನ ಪ್ರಾಣಿಬಲಿ ಆಚರಣೆಗೆ ತಂದರು. ಎಲ್ಲ ದೇಶಗಳ ಸಮಾಜಗಳಲ್ಲಿ, ಒಂದಲ್ಲ ಒಂದು ಸಮಯದಲ್ಲಿ, ಒಂದಲ್ಲ ಒಂದು ರೀತಿ ಪ್ರಾಣಿಬಲಿ ಪದ್ಧತಿಯಿತ್ತು. ಕಾಲಕ್ರಮೇಣ ಇದು ಬಹುತೇಕವಾಗಿ ನಿಂತಿದೆ.

‘ಅರ್ಜುನ, ನೀನು ಕೂಡ ಸ್ವಧರ್ಮವಾಗಿ ಬಂದಿರುವ ಈ ಧರ್ಮವಿರೋಧಿ ದುಷ್ಟರ ನಾಶ ಮಾಡದಿದ್ದಲ್ಲಿ ಧರ್ಮವೇ ಹಾನಿಗೊಳಗಾಗುವುದು. ಆದ್ದರಿಂದ ಧರ್ಮವಿರೋಧಿಗಳನ್ನು ಸಂಹರಿಸು. ಇಲ್ಲಿ ಹಿಂಸೆ ಅಪವಾದ. ಇದಕ್ಕೆ ಸಿದ್ಧನಾಗಿರುವುದೇ ನಿನ್ನ ಸ್ವಧರ್ಮ’ ಎನ್ನುತ್ತಿದ್ದಾನೆ ಪರಮಾತ್ಮ.

(ಸಂಗ್ರಹ: ಸುರೇಶ್​ಕುಮಾರ್)

Leave a Reply

Your email address will not be published. Required fields are marked *

Back To Top