ಬಿರುಗಾಳಿಯಿಂದ ಗಿರಿ ಜಿಲ್ಲೆ ಅಸ್ತವ್ಯಸ್ಥ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಕಳೆದ ನಾಲ್ಕೈದು ದಿನಗಳಿಂದ ಕಾದು ಕೆಂಡವಾಗಿದ್ದ ಗಿರಿಜಿಲ್ಲೆ ಮಂಗಳವಾರ ಸಂಜೆ ಸುರಿದ ಅಲ್ಪಮಳೆಗೆ ಕೊಂಚ ತಂಪಾಗಿದ್ದು, ಗುಡುಗು, ಬಿರುಗಾಳಿ ಮಿಶ್ರಿತ ಮಳೆಯಿಂದಾಗಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಕೆಲ ಗ್ರಾಮಗಳಲ್ಲಿ ಅನಾಹುತ ಸೃಷ್ಠಿಸಿದೆ.

ಮಂಗಳವಾರ ಸಂಜೆ 4.30ಕ್ಕೆ ಆರಂಭಗೊಂಡ ಬಿರುಗಾಳಿಯಿಂದ ನಗರದಲ್ಲಿನ ಜನತೆ ಕೆಲಕಾಲ ಆತಂಕಗೊಂಡಿದ್ದರು. ಬಿರುಗಾಳಿಯಿಂದ ನಗರದ ಹೃದಯಭಾಗದಲ್ಲಿನ ಬೆಟ್ಟ ಸಹ ಕಾಣದಂತಾಯಿತಲ್ಲದೆ, ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಯಿತು. ಬೃಹತ್ ಬ್ಯಾನರ್ಗಳು ಬಿರುಗಾಳಿಗೆ ನೆಲಕಚ್ಚಿದರೆ, ನಗರದ ಹಲವೆಡೆ ಮರಗಳು ಧರೆಗುರುಳಿವೆ. ಇದಲ್ಲದೆ ರಸ್ತೆ ಬದಿಯಲ್ಲಿದ್ದ ಕಸ ಇಡೀ ರಸ್ತೆಯನ್ನು ಆಕ್ರಮಿಸಿ, ಅಂಗಡಿ ಮುಂಗಟ್ಟುಗಳ ಮುಂದಿಟ್ಟಿದ್ದ ಪ್ಲಾಸ್ಟಿಕ್ ವಸ್ತುಗಳು ರಸ್ತೆಗೆ ಜಾರಿದವು.

ಬಿರುಗಾಳಿಯಿಂದ ನಗರದ ಹೊರವಲಯದಲ್ಲಿನ ಅಲೆಮಾರಿ, ಬುಡ್ಗ ಜಂಗಮ ಕಾಲನಿಯಲ್ಲಿ ಪತ್ರಾಸ್ಗಳು ಹಾರಿದ್ದು, ಗುಡಾರಗಳು ನೆಲಕಚ್ಚಿವೆ. ಜೋರಾಗಿ ಬೀಸಿದ ಬಿರುಗಾಳಿಗೆ ಆಹಾರ ಪದಾರ್ಥಗಳು ಮಣ್ಣುಪಾಲಾಗಿದೆ. ನಗರದ ಚಾಮಾ ಲೇಔಟ್, ಲಕ್ಷ್ಮೀನಗರ, ಹೊಸಳ್ಳಿ ಕ್ರಾಸ್ ಸೇರಿ ಅನೇಕ ಬಡಾವಣೆಗಳಲ್ಲಿ ಮರಗಳು ನೆಲಕಚ್ಚಿದ್ದು, ಗುರುಮಠಕಲ್ನ ಕೆಲ ವಾಡರ್್ಗಳಲ್ಲಿನ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿರುವ ಬಗ್ಗೆ ವರದಿಯಾಗಿವೆ.

ಬಿರುಗಾಳಿಯಿಂದ ಗಿರಿಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಕೋಟಗೇರಾ ಗ್ರಾಮದಲ್ಲಿ ಎತ್ತೊಂದು ಮೃತಪಟ್ಟಿದೆ.
ಇನ್ನೂ ಚೆಪೇಟ್ಲಾ, ಶಿವಪುರ ಗ್ರಾಮಗಳಲ್ಲಿ ಬೃಹದಾಕಾರದ ಮರಗಳು ಹಾಗೂ ಸುಮಾರು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಗುರುಮಠಕಲ್ ಪಟ್ಟಣದ ಕೆಲ ವಾಡರ್್ಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅದೃಷ್ಠವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.