ಗಾಯತ್ರಿ ಪದದಲ್ಲಿದೆ ಮಹಾನ್ ಶಕ್ತಿ

ಶಿಗ್ಗಾಂವಿ: ಗಾಯತ್ರಿ ಎಂಬ ಮೂರು ಪದದಲ್ಲೇ ಮಹಾನ್ ಶಕ್ತಿ ಅಡಗಿದೆ. ನಿತ್ಯ ಗಾಯತ್ರಿ ಜಪ ಮತ್ತು ದೇವಿಯ ಆರಾಧನೆ ಮನಃಪೂರ್ವಕವಾಗಿ ಮಾಡಿದಾಗ ಸಂಕಷ್ಟಗಳು ದೂರಾಗುವುದಲ್ಲದೆ, ಬದುಕಿಗೆ ಮುಕ್ತಿ ದೊರೆಯುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ತಡಸ ಕ್ರಾಸ್​ನ ಗಾಯತ್ರಿ ತಪೋಭೂಮಿಯಲ್ಲಿ ಶುಕ್ರವಾರ ಗಾಯತ್ರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ತಪ್ಪುಗಳನ್ನು ಮಾಡುವುದು ಸಹಜ ಆದರೆ, ಅದನ್ನು ಅರಿತು ತಿದ್ದಿಕೊಂಡು ಬದಲಾವಣೆ ಕಂಡುಕೊಂಡಾಗ ಅವನಲ್ಲಿ ದೈವೀ ಸ್ವರೂಪ ಮೂಡುತ್ತದೆ. ದೇವರ ಆರಾಧನೆ, ಧರ್ಮದಲ್ಲಿ ನಿಷ್ಠೆಯಿದ್ದಾಗ ತಪ್ಪನ್ನು ತಿದ್ದಿಕೊಳ್ಳುವ ಮನೋಭಾವ ತಾನಾಗಿಯೇ ಬರುತ್ತದೆ. ಇದು ಗಾಯತ್ರಿ ಮಂತ್ರದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ಗಾಯತ್ರಿ ಮಂತ್ರ ಜಪ ಮಾಡುವ ಮೂಲಕ ಬದುಕಿನಲ್ಲಿ ಬದಲಾವಣೆ ಕಂಡುಕೊಳ್ಳಬಹುದಾಗಿದೆ ಎಂದರು.

ಆದಿಶಂಕರರು ಮೋಕ್ಷಕ್ಕೆ ರಾಜ ಮಾರ್ಗ ತೋರಿಸಿದ ಮಹಾನ್ ಪುರುಷರು. ಶಂಕರರ ಉಪದೇಶದಂತೆ ಚಿತ್ತಶುದ್ಧಿ ಗ್ರಹಿಸಿಕೊಂಡವನಿಗೆ ಈಶ್ವರನ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಮ್ಮ ಸ್ವ ಧರ್ಮ ಸಂಕಷ್ಟದಲ್ಲಿದ್ದಾಗ ಶಂಕರರು ಮಾರ್ಗದರ್ಶನ ತೋರಿಸಿದರು. ಅದ್ವೈತ ಸಿದ್ಧಾಂತದ ಮೂಲಕ ಧರ್ಮ ರಕ್ಷಿಸಿ, ಮನುಕುಲದ ಉದ್ಧಾರ ಮಾಡಿದರು. ಹೀಗಾಗಿ ಅವರ ಉಪದೇಶದಂತೆ ಸ್ವಧರ್ಮದ ರಕ್ಷಣೆಗೆ ಪ್ರತಿಯೊಬ್ಬರೂ ಸನ್ನದ್ಧರಾಗಿ ಧರ್ವಚರಣೆಯ ಮೂಲಕ ಬದುಕಿನಲ್ಲಿ ನೆಮ್ಮದಿ ಪಡೆದುಕೊಳ್ಳಬೇಕು ಎಂದರು.

ಮನುಷ್ಯನಿಗೂ ಮತ್ತು ಪ್ರಾಣಿಗಳ ಬದುಕಿನ ಜೀವನಕ್ಕೂ ವ್ಯತ್ಯಾಸವಿಲ್ಲ. ಆದರೆ, ಭಗವಂತ ಮನುಷ್ಯನಿಗೆ ಧರ್ವಚರಣೆಯ ಜ್ಞಾನ ಕಲ್ಪಿಸಿದ್ದಾನೆ. ಅದು ಮುಕ್ತಿದಾರಿಯಾಗಿದೆ. ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದಾಗ ಆರಾಧ್ಯ ದೈವಗಳು ನಮ್ಮನ್ನು ರಕ್ಷಿಸುತ್ತವೆ. ಆದರೆ, ಈ ಪುಣ್ಯದ ಕಾರ್ಯ ಪ್ರಾಣಿಗಳಿಗಿಲ್ಲ ಎಂಬುದನ್ನು ನಾವು ಮನದಲ್ಲಿಟ್ಟುಕೊಂಡಾಗ ಮಾತ್ರ ಗುರುಭಕ್ತಿ ಧರ್ಮಶ್ರದ್ಧೆ ನಮ್ಮಲ್ಲಿ ಉಳಿಯುತ್ತದೆ. ಆ ಮೂಲಕ ಎದುರಾದ ಕಷ್ಟಗಳು ತಾನಾಗಿಯೇ ನಿವಾರಣೆಯಾಗುತ್ತದೆ. ಗಾಯತ್ರಿ ಮಂತ್ರ ಪ್ರತಿಯೊಬ್ಬನ ಬದುಕಿಗೂ ದಿವ್ಯೌಷಧ ಎಂಬುದನ್ನು ತಿಳಿಯಬೇಕು. ಎಲ್ಲರಿಗೂ ಮಾತೆ ಗಾಯತ್ರಿ ಆಶೀರ್ವದಿಸಿ ನಾಡಿಗೆ ಸುಭಿಕ್ಷೆ ತರಲಿ ಎಂದರು.

ಗಾಯತ್ರಿ ತಪೋಭೂಮಿ ಟ್ರಸ್ಟ್​ನ ಕೆ.ಎಲ್. ಕುಲಕರ್ಣಿ, ವಿನಾಯಕ ಅಕಳವಾಡಿ, ಅಶೋಕ ಹರಪನಹಳ್ಳಿ ಸೇರಿ ಸಾವಿರಾರು ಭಕ್ತ ಸಮೂಹ ಶ್ರೀಗಳ ಆಶೀರ್ವಾದ ಪಡೆದರು.

ತಪೋಭೂಮಿಯ ಆವರಣದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳು ಶಾಲೆ ಹಾಗೂ ಚೈತನ್ಯ ಯಾತ್ರಿ ನಿವಾಸದ ಕಟ್ಟಡ ನಿರ್ವಣಕ್ಕೆ ಭೂಮಿಪೂಜೆ, ನೂತನ ವಾಹನ, ಗೋವು ಪೂಜೆ ನೆರವೇರಿಸಿದರು.

ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ: ದಿಗ್ವಿಜಯ ಯಾತ್ರೆಯ ಪ್ರಯುಕ್ತ ಪ್ರವಾಸದಲ್ಲಿರುವ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಗುರುವಾರ ಸಂಜೆ ಗಾಯತ್ರಿ ತಪೋಭೂಮಿಗೆ ಆಗಮಿಸಿದಾಗ ನೆರೆದಿದ್ದ ಸಾವಿರಾರು ಭಕ್ತರ ಮಧ್ಯೆ ಪೂರ್ಣಕುಂಭ ಸ್ವಾಗತ, ಧೂಳಿ ಪಾದಪೂಜೆ ನೆರವೇರಿಸಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪುಷ್ಟಾರ್ಚನೆ ಮಾಡಿ ವೇದಘೊಷ, ಶಂಕರ ಪಠಣ, ಸೌಂದರ್ಯ ಲಹರಿ, ಶ್ಲೋಕಗಳನ್ನು ಹೇಳಲಾಯಿತು. ತಪೋಭೂಮಿ ದೀಪಾವಳಿಯ ದೀಪಾಲಂಕೃತದ ಜೊತೆಗೆ ಶ್ರೀಗಳ ಆಗಮನದಿಂದ ವೇದಘೊಷಗಳ ಸ್ವರ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತು.