ಸಿಂಧನೂರು: ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಬುಧವಾರ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ 6ನೇ ದಿನದ ಸದ್ಭಾವನಾ ಯಾತ್ರೆ ನಡೆಸಿ ಸಹಬಾಳ್ವೆ, ಸಾಮರಸ್ಯದ ಸಂದೇಶ ಸಾರಿದರು.
ಗ್ರಾಮದ ಓಣಿಗಳಲ್ಲಿ ವಿವಿಧ ಆಕೃತಿಯ ರಂಗೋಲಿ ಹಾಕಿ, ಬಣ್ಣಗಳನ್ನು ತುಂಬಿ, ಹೂವು ದೀಪಗಳನ್ನು ಇಟ್ಟು ಸಿಂಗರಿಸಲಾಗಿತ್ತು. ಶ್ರೀಗಳು ಸಂಚರಿಸುವ ರಸ್ತೆಗಳ ಉದ್ದಕ್ಕೂ ಬಾಳೆಗಿಡ, ತೆಂಗಿನ ಗರಿ, ಮಾವಿನ ಎಲೆಗಳಿಂದ ಸಿಂಗಾರ ಮಾಡಲಾಗಿತ್ತು.
ಗವಿಸಿದ್ಧೇಶ್ವರ ಸ್ವಾಮೀಜಿ ಗ್ರಾಮಕ್ಕೆ ಬರುತ್ತಿದ್ದಂತೆಯೇ ಮುಖಂಡರು, ಸಾವಿರಾರು ಮಹಿಳೆಯರು, ಮಕ್ಕಳು ಭವ್ಯ ಸ್ವಾಗತ ಕೋರಿದರು. ನಂತರ ಗ್ರಾಮದ ಓಣಿಗಳಲ್ಲಿ ಶ್ರೀಗಳು ಸಂಚರಿಸಿದರು. ಕೃಷ್ಣಯ್ಯಶಾಸ್ತ್ರಿ, ಮರಿಬಸವಸ್ವಾಮೀಜಿ, ಮರುಳಸಿದ್ಧಯ್ಯ ಸ್ವಾಮೀಜಿ, ಶಿವಲಿಂಗಯ್ಯಸ್ವಾಮೀಜಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ, ಶರಣೇಗೌಡ ಗೊರೇಬಾಳ, ಎನ್.ಭೀಮನಗೌಡ ಗೊರೇಬಾಳ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ಲಿಂಗರಾಜ ಪಾಟೀಲ್, ಲಿಂಗಪ್ಪ ಗುಡೂರು ಇತರರಿದ್ದರು.