ತಮ್ಮನ್ನು ತೆಗಳಿದ ಶಾಹಿದ್​ ಅಫ್ರಿದಿಗೆ ಗೌತಮ್​ ಗಂಭೀರ್​ ಕೊಟ್ಟ ಕಟು ಪ್ರತಿಕ್ರಿಯೆ ಹೀಗಿದೆ…

ನವದೆಹಲಿ: ಪಾಕಿಸ್ತಾನದ ಕ್ರಿಕೆಟರ್​ ಶಾಹಿದ್​ ಅಫ್ರಿದಿ ತಮ್ಮ ‘ಗೇಮ್​ ಚೇಂಜರ್’​ ಪುಸ್ತಕದಲ್ಲಿ ಭಾರತದ ಕ್ರಿಕೆಟ್​ ಆಟಗಾರ ಗೌತಮ್​ ಗಂಭೀರ್​ ಅವರನ್ನು ತೆಗಳಿ ಬರೆದಿದ್ದು, ಅವರ ಟೀಕೆಗೆ ಇದೀಗ ಗೌತಮ್​ ಗಂಭೀರ್​ ತೀವ್ರ ತಿರುಗೇಟು ನೀಡಿದ್ದಾರೆ.

ಗೇಮ್ ಚೇಂಜರ್​ ಎಂಬುದು ಶಾಹಿದ್​ ಅಫ್ರಿದಿಯವರ ಆತ್ಮಚರಿತ್ರೆಯಾಗಿದ್ದು, ಈ ಪುಸ್ತಕದಲ್ಲಿ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಂತೆ ಗೌತಮ್​ ಗಂಭೀರ್​ ಅತಿರೇಕದ ಅಹಂಕಾರದಿಂದ ವರ್ತಿಸುತ್ತಿದ್ದರು ಬಿಟ್ಟರೆ ಯಾವುದೇ ದಾಖಲೆಯನ್ನೂ ನಿರ್ಮಿಸಿಲ್ಲ. ತಮ್ಮನ್ನು ತಾವು ಜೇಮ್ಸ್​ ಬಾಂಡ್​, ಡಾನ್​ ಬ್ರಾಡ್ಮನ್​ ಎಂದುಕೊಂಡು ಬಿಟ್ಟಿದ್ದರು ಎಂದು ಗಂಭೀರ್​ ವಿರುದ್ಧ ತುಂಬ ಋಣಾತ್ಮಕ ವಿಚಾರಗಳನ್ನೇ ಬರೆದಿದ್ದಾರೆ.
ಅಫ್ರಿದಿ ಪುಸ್ತಕದ ಬಗ್ಗೆ ಮೊದಲು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ಗಂಭೀರ್​, ಇದೀಗ ಅಫ್ರಿದಿಯವರೇ ನಿಮ್ಮನ್ನು ನಾನೇ ಒಬ್ಬ ಮನಃಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇನೆ ಎಂದು ಕಟುವಾಗಿ ಉತ್ತರಿಸಿದ್ದಾರೆ.

ಅಫ್ರಿದಿಯವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿರುವ ಗಂಭೀರ್​, ನೀವು ಅತಿಯಾಗಿ, ಮಿತಿಮೀರಿ ನಗುವ, ಉಲ್ಲಾಸದಿಂದ ಇರುವ ಮನುಷ್ಯ. ಹುಚ್ಚನಂತೆ ಭಾಸವಾಗುತ್ತೀರಿ. ಇರಲಿ, ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ಭಾರತಕ್ಕೆ ಬರುವ ಪಾಕಿಸ್ತಾನದ ಜನರಿಗೆ ನಾವು ವೀಸಾ ನೀಡುತ್ತೇವೆ. ನೀವು ಬನ್ನಿ, ನಾನೇ ಖುದ್ದಾಗಿ ಒಂದೊಳ್ಳೆ ಮನಃಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

2007ರಲ್ಲಿ ಕಾನ್ಪುರದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಅಫ್ರಿದಿ ಹಾಗೂ ಗೌತಮ್​ ಗಂಭೀರ್​ ವಿರುದ್ಧ ವಾಗ್ದಾಳಿ ನಡೆದಿದ್ದು ಬಹುದೊಡ್ಡ ಸುದ್ದಿಯಾಗಿತ್ತು. ಅದನ್ನೂ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಫ್ರಿದಿ, ನನಗೆ ಸ್ಪರ್ಧಾತ್ಮಕ, ಸಕಾರಾತ್ಮಕ ಮನೋಭಾವ ಇರುವವರು ಇಷ್ಟವಾಗುತ್ತಾರೆ. ಆದರೆ ಗೌತಮ್​ ಗಂಭೀರ್​ಗೆ ತುಂಬ ಸಿಟ್ಟು. ಅವರದ್ದೇ ಆದ ಒಂದು ವ್ಯಕ್ತಿತ್ವ ಇಲ್ಲ ಎಂದೆಲ್ಲ ಪುಸ್ತಕದಲ್ಲಿ ಟೀಕಿಸಿದ್ದಾರೆ.