ಹೊನ್ನಾಳಿ: ಪಟ್ಟಣದ ಹಳದಮ್ಮದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಐತಿಹಾಸಿಕ ಹಿಂದು ಮಹಾಸಭಾದ ಗೌರಿ ಗಣೇಶ ವಿಸರ್ಜನಾ ಕಾರ್ಯಕ್ರಮ ಭಾನುವಾರ ಸಾವಿರಾರು ಭಕ್ತರ ನಡುವೆ ಪಟ್ಟಣದ ಅದ್ದೂರಿಯಾಗಿ ಜರುಗಿತು.
ಪ್ರಮುಖ ರಸ್ತೆಗಳಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ನಡುವೆ ಭವ್ಯ ಮೆರವಣಿಗೆ ನಡೆದು ನಂತರ ತುಂಗಭದ್ರಾ ನದಿಯಲ್ಲಿ ರಾತ್ರಿ ಗೌರಿ ಗಣೇಶನನ್ನು ವಿಸರ್ಜಿಸಲಾಯಿತು.
ವಿವಿಧ ತಾಲೂಕುಗಳಿಂದ ಆಗಮಿಸಿದ ಯುವಕರು ಡಿಜೆ ಜತೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಮಹಿಳೆಯರು ನಿಂತು ಗಣೇಶನನ್ನು ವೀಕ್ಷಿಸಿದರೆ, ಜತೆಯಲ್ಲಿದ್ದ ಯುವತಿಯರು ಹಾಗೂ ಮಕ್ಕಳು ಡಿಜೆ ಸಂಗಿತಕ್ಕೆ ತಕ್ಕಂತೆ ನೃತ್ಯ ಮಾಡಿದರು. ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದಾಗ ವೇದಿಕೆಯಲ್ಲಿ ಸ್ಯಾಕ್ಸೋಫೊನ್ ಹಾಗೂ ಚಂಡೆವಾದ್ಯ ಮೇಳ ಜನಮನ ಸೆಳೆಯಿತು.
ಓಂಕಾರದಲ್ಲಿ ಉರಿದ ಕರ್ಪೂರ: ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಗಣೇಶ ಮೆರವಣಿಗೆ ಆಗಮಿಸಿದಾಗ ಕೇಸರಿ ಬಣ್ಣದಲ್ಲಿ ಬರೆದಿದ್ದ ಓಂ ಗೆ ಕರ್ಪೂರ ಇಟ್ಟು ಹತ್ತಿಸಿದಾಗ ಓಂಕಾರ ಬೆಂಕಿಯಲ್ಲಿ ಕೇಸರಿಮಯವಾಗಿ ಕಾಣುತ್ತಿತ್ತು. ಯುವಕರು ಓಂಕಾರದ ಸುತ್ತ ಕುಣಿದು ಜೈಶ್ರೀರಾಂ ಘೋಷಣೆ ಕೂಗಿದರು.
ಗಮನ ಸೆಳೆದ ಚಂಡೆವಾದ್ಯ: ದಕ್ಷಿಣ ಕನ್ನಡದಿಂದ ಆಗಮಿಸಿದ್ದ ಚಂಡೆವಾದ್ಯದ ಸದ್ದಿಗೆ ಜನರು ನಿಂತಲ್ಲಿಯೇ ಕುಣಿದರು. ಜತೆಗೆ, ಸ್ಥಳೀಯ ಜಾನಪದ ಕಲಾ ಮೇಳಗಳು ಭಾಗವಹಿಸಿದ್ದವು.
ಗಣಪತಿ ಬಪ್ಪಾ ಮೋರಯಾ .., ಜೈ ಶ್ರೀರಾಮ್.. ಭಾರತ್ ಮಾತಾ ಕಿ ಜೈ.. ಸೇರಿದಂತೆ ಹಲವು ಮಹಾನ್ ದೇಶಭಕ್ತರಿಗೆ ಜೈಕಾರ ಹಾಕಿದರು. ಭಕ್ತರಿಗಾಗಿ ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.
ಬಿಗಿ ಬಂದೋಬಸ್ತ್: ಗಣೇಶ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 1 ಡಿವೈಎಸ್ಪಿ, 3 ಸಿಪಿಐ, 5 ಪಿಎಸೈ, 8 ಎಎಸೈ, 80 ಎಚ್‌ಸಿ ಹಾಗೂ ಪಿಸಿ 60 ಗೃಹ ರಕ್ಷಕದಳ ಹಾಗೂ ತಲಾ ಒಂದು ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿತ್ತು.
ಹಿಂದು ಮಹಾಸಭಾದ ಅಧ್ಯಕ್ಷ ಬಿಸಾಟಿ ನಾಗರಾಜ್, ಪ್ರಮುಖರಾದ ಎಂ.ಆರ್. ಮಹೇಶ್, ರಾಜು ಕಣಗಣ್ಣಾರ್, ವಿನಯ್ ವಗ್ಗರ್, ಹರ್ಷ, ನರಸಿಂಹಪ್ಪ, ಪ್ರಶಾಂತ್, ಹಾಲೇಶ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಇತರರು ಇದ್ದರು.