ವಿ.ಕೆ.ರವೀಂದ್ರ ಕೊಪ್ಪಳ
ಎಲ್ಲಿ ನೋಡಿದರೂ ಕೇಸರಿ ವಸ್ತ್ರ ಧರಿಸಿದ ಮಾಲಾಧಾರಿ ಗಳು. ಮರ್ಯಾದಾ ಪುರುಷೋತ್ತಮ ಶ್ರೀರಾಮ, ಆತನ ಬಂಟ ಹನುಮನ ಜಪ. ಕಡಿದಾದ ಬೆಟ್ಟದಲ್ಲಿ ಕೊರೆವ ಚಳಿಯನ್ನೂ ಲೆಕ್ಕಿಸದೆ ದರ್ಶನ ಪಡೆದ ಭಕ್ತ ವೃಂದ. ಹನುಮ ಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಆಂಜನೇಯ ಜನಿಸಿದ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು. ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರದಿಂದ ಪಾದಯಾತ್ರೆ ಹಾಗೂ ವಾಹನಗಳಲ್ಲಿ ಆಗಮಿಸಿದ್ದ ಲಕ್ಷಾಂತರ ಭಕ್ತರು ಗುರುವಾರ ರಾತ್ರಿಯಿಂದಲೇ ಹನುಮ ದರ್ಶನಕ್ಕೆ ಸಾಲುಗಟ್ಟಿದ್ದರು. ಶುಕ್ರವಾರ ಬೆಳಗ್ಗೆ 3 ಗಂಟೆಗೆ ಹೋಮ ಪೂರ್ಣಗೊಳ್ಳುತ್ತಲೇ ವ್ರತಧಾರಿಗಳು 575 ಮೆಟ್ಟಿಲು ಹತ್ತಿ ಮಾಲೆ ವಿಸರ್ಜಿಸಿ ಪುನೀತರಾದರು.
ದೂರದಲ್ಲೇ ವಾಹನ ನಿಲುಗಡೆ: ಅಂಜನಾದ್ರಿ ಬೆಟ್ಟದಿಂದ 5 ಕಿ.ಮೀ.ದೂರದಲ್ಲೇ ವಾಹನಗಳ ರ್ಪಾಂಗ್ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ಸಿಕ್ಕು ಕಾಣಲಿಲ್ಲ. ಸಾರಿಗೆ ಬಸ್ ಮೂಲಕ ಬೆಟ್ಟದ ಕೆಳಭಾಗದವರೆಗೆ ಭಕ್ತರನ್ನು ಉಚಿತವಾಗಿ ಕರೆದೊಯ್ಯಲಾಯಿತು. ಬೆಟ್ಟದ ಕೆಳಭಾಗದ ಪ್ರವೇಶ ದ್ವಾರದಲ್ಲಿ ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಹನುಮ ವೇಷಧಾರಿಗಳು, ಪುಟಾಣಿಗಳು ಮೆಟ್ಟಿಲು ಹತ್ತಿ ಭಕ್ತಿ ಮೆರೆದರು. ಬೆಟ್ಟದ ಮೇಲ್ಭಾಗ, ಕೆಳ ಭಾಗದ ವೇದ ಪಾಠ ಶಾಲೆ ಹತ್ತಿರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಭಿಮಾನಿಗಳ ಪೈಪೋಟಿ: ಮಾಲಾಧಾರಿಗಳು ಹನುಮ, ಶ್ರೀರಾಮರ ಭಾವಚಿತ್ರ ಹಿಡಿದು ಜಪಗೈದರು. ಕೆಲವರು ನಟ ದಿ.ಪುನೀತ್ ರಾಜ್ಕುಮಾರ್ ಹಾಗೂ ದರ್ಶನ್ ಭಾವಚಿತ್ರದೊಂದಿಗೆ ಬೆಟ್ಟ ಹತ್ತಿದರು. ಇನ್ನೂ ಕೆಲವರು ಲಾರೆನ್ಸ್ ಬಿಷ್ಣೋಯ್, ಶಾಸಕ ಬಸನಗೌಡ ಯತ್ನಾಳ ಫೋಟೋ ಹಿಡಿದಿದ್ದು ಕಂಡುಬಂತು.
ಸಂಕೀರ್ತನ ಯಾತ್ರೆ: ಹಿಂದುಪರ ಸಂಘಟನೆಗಳು ಶಾಸಕ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಗಂಗಾವತಿ ಯಲ್ಲಿ ಸಂಕೀರ್ತನ ಯಾತ್ರೆ ನಡೆಸಿ ಧರ್ಮ ಜಾಗೃತಿ ಮೂಡಿಸಿದವು. ಮುಸ್ಲಿಮರು ಮಾಲಾಧಾರಿಗಳಿಗೆ ಪುಷ್ಪ ಅರ್ಪಿಸಿ ಶುಭ ಕೋರಿ ಭಾವೈಕ್ಯ ಮೆರೆದರು. ಬಳಿಕ ಧರ್ಮ ಸಭೆ ನಡೆಸಿ ಯಾತ್ರಿಗಳು ಅಂಜನಾದ್ರಿಯತ್ತ ಹೆಜ್ಜೆ ಹಾಕಿದರು.