ಪ್ರಣಾಳಿಕೆಯಲ್ಲಿರಲಿ ಬೆಳೆಗಾರರ ಸಮಸ್ಯೆಗೆ ಪರಿಹಾರ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಬೇಕು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.

ವಿವಿಧ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿರುವ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಂ, ವಾತಾವರಣದ ಏರುಪೇರು, ಕೀಟ ಹಾವಳಿ, ಕಾರ್ವಿುಕರ ದಿನಗೂಲಿ ಹೆಚ್ಚಳದಿಂದ ತೋಟಗಳನ್ನು ನಿರ್ವಹಿಸುವುದೇ ಕಷ್ಟವಾಗಿದೆ. ಜತೆಗೆ ಅಂತಾರಾಷ್ಟ್ರೀಯವಾಗಿ ಕಾಫಿ ಬೆಲೆ ತೀವ್ರ ಕುಸಿದಿದೆ. ಹಾಗಾಗಿ ಪಕ್ಷಗಳು ಬೆಳೆಗಾರರ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದಿನ ವರ್ಷಗಳಲ್ಲಿ ಮಳೆ ಕೊರತೆ, ಕೀಟ ಹಾವಳಿ, ಅಧಿಕ ನಿರ್ವಹಣಾ ವೆಚ್ಚ ಹಾಗೂ ಕಳೆದ ವರ್ಷ ಅತಿವೃಷ್ಟಿಯಿಂದ ಮತ್ತು ಕುಸಿಯುತ್ತಿರುವ ಬೆಲೆಯಿಂದಾಗಿ ಸಾಲ ಪಾವತಿಸಲು ಸಾಧ್ಯವಾಗುತ್ತಿಲ್ಲ. ಬರುವ ಅಲ್ಪಸ್ವಲ್ಪ ಆದಾಯವನ್ನು ಕಾಫಿ ತೋಟಗಳ ನಿರ್ವಹಣೆಗೆ ವ್ಯಯಿಸಬೇಕಾಗಿದೆ ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ಬೆಳೆಗಾರರ ಸಾಲದ ಬಡ್ಡಿ ಮನ್ನಾ, ಸಾಲವನ್ನು ಮರುನಿಗದಿಗೊಳಿಸಿ ಪಾವತಿಸಲು ಅವಕಾಶ ನೀಡುವುದು, ಬಡ್ಡಿ ದರವನ್ನು ಶೇ.3ಕ್ಕೆ ಇಳಿಸಬೇಕು ಮತ್ತು ಡಾ. ಎಂ.ಎಸ್.ಸ್ವಾಮಿನಾಥನ್ ಸಮಿತಿ ಶಿಫಾರಸಿನಂತೆ ಕೇಂದ್ರ ಸರ್ಕಾರ ಕಾಫಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕುರಿತು ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಳೆಗಾರರಿಗೆ ಅಗತ್ಯವಾದ ಕಾಫಿ ಕಷಾಯ ತಯಾರಿಸುವ ಹಾಗೂ ಕಾಫಿ ವಿತರಣಾ ಯಂತ್ರಗಳನ್ನು ಹೊರದೇಶದಿಂದ ತರಿಸಲು ಅವಕಾಶವಾಗುವಂತೆ ಅದರ ಮೇಲೆ ವಿಧಿಸುತ್ತಿರುವ ರಫ್ತು ಸುಂಕ ಸಂಪೂರ್ಣ ತೆಗೆದುಹಾಕಬೇಕು. 10 ಹೆಕ್ಟೇರ್​ಗಿಂತ ಕಡಿಮೆ ಕಾಫಿ ತೋಟ ಹೊಂದಿರುವವರಿಗೆ ಕೇಂದ್ರ ನೇರ ತೆರಿಗೆ ಮಂಡಳಿಯು ತೆರಿಗೆ ವಿನಾಯಿತಿ ನೀಡಬೇಕು. ಕಾರ್ವಿುಕರ ಭವಿಷ್ಯ ನಿಧಿ ಹಂಚಿಕೆಯಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಕಾಫಿ ಮಂಡಳಿಗೆ ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ ಅವರಿಗೆ ಯಾವುದೇ ಅಧಿಕಾರ ನೀಡಿಲ್ಲ. ತಕ್ಷಣ ಅವರಿಗೆ ಅಧಿಕಾರ ನೀಡಲು ಸರ್ಕಾರದ ಮೇಲೆ ಒತ್ತಡ ತರಬೇಕು. ಕೀಟ ಹಾವಳಿ ಮತ್ತು ಕಾಫಿಗೆ ತಗುಲುವ ರೋಗಗಳನ್ನು ತಡೆಗಟ್ಟಲು ಸಂಶೋಧನಾ ಚಟುವಟಿಕೆ ತೀವ್ರವಾಗಿಸಲು ಕೇಂದ್ರ ಸರ್ಕಾರ ಗಮನಹರಿಸುವ ಭರವಸೆ ನೀಡಬೇಕು. | ಯು.ಎಂ.ತೀರ್ಥಮಲ್ಲೇಶ್, ಬಿ.ಎಸ್.ಜೈರಾಂ

ಬೇಲಿ ನಿರ್ವಣಕ್ಕೆ ಅನುದಾನ ಕೊಡಿ

ಹಲವು ವರ್ಷಗಳಿಂದ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಕಾಫಿ ಬೆಳೆಯುವ ಅನೇಕ ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಇದರಿಂದ ಕಾಫಿ ಮತ್ತು ಉಪಬೆಳೆಗಳಾದ ಕಾಳುಮೆಣಸು, ಅಡಕೆ, ಏಲಕ್ಕಿ ಮತ್ತು ಭತ್ತದ ಬೆಳೆ ಆನೆ ಹಾವಳಿಯಿಂದ ನಾಶವಾಗುತ್ತಿವೆ. ಜತೆಗೆ ಪ್ರಾಣಹಾನಿಯೂ ಸಂಭವಿಸುತ್ತಿದೆ. ಸರ್ಕಾರ ನೀಡುತ್ತಿರುವ ಪರಿಹಾರ ಹಣ ಅತ್ಯಂತ ಕಡಿಮೆಯಿದೆ. ಅದನ್ನು ಹೆಚ್ಚು ಮಾಡಬೇಕು. ಆನೆಗಳು ಬರದಂತೆ ರೈಲು ಹಳಿಗಳ ಬೇಲಿ ನಿರ್ವಿುಸಲು ಮುಂದಾಗಬೇಕು ಎಂದು ಆಗ್ರಹಿಸಬೇಕು. ರಾಜ್ಯ ಸರ್ಕಾರ ಇದಕ್ಕೆ 500 ಕೋಟಿ ರೂ. ಮೀಸಲಿಟ್ಟಿದ್ದು, ಕೇಂದ್ರ ಸರ್ಕಾರವೂ 500 ಕೋಟಿ ರೂ. ನೀಡಬೇಕೆಂದು ಕೆಜಿಎಫ್ ಒತ್ತಾಯಿಸಿದೆ. ಕಾಫಿ ಬೆಳೆಗಾರರಿಗೆ ಸಹಕಾರ ನೀತಿ ಮಾದರಿಯಲ್ಲಿ ಅತ್ಯಂತ ಅವಶ್ಯಕವಾದ ಕೋಮಾರ್ಕ್ ಪುನಶ್ಚೇತನಗೊಳಿಸಲು 50 ಕೋಟಿ ರೂ. ನೀಡಿ ಕಾಫಿ ಖರೀದಿಸಲು ಆ ಸಂಸ್ಥೆಗೆ ಸಹಾಯ ನೀಡಿದಲ್ಲಿ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಕೋಮಾರ್ಕ್ ವಿಧಿಸುವ ಬೆಲೆ ಒಂದು ರೀತಿ ಮಾರುಕಟ್ಟೆ ಬೆಲೆಗೆ ಮೂಲ ಬೆಲೆಯಾಗಬಹುದು ಎಂದು ಹೇಳಿದೆ.