
ಶಿವಮೊಗ್ಗ: ಹಸಿರು ಉಳಿಸಲು ಮತ್ತು ಜನರು ಆರೋಗ್ಯಕರ ಜೀವನ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಪಾರ್ಕ್‌ಗಳಲ್ಲಿ ಜಿಮ್, ಮಕ್ಕಳ ಆಟಿಕೆಗಳ ಅಳವಡಿಸಿ ಸುಂದರ ನಗರ ನಿರ್ಮಾಣ ಮಾಡಲಾಗುವುದು ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಗೋಪಶೆಟ್ಟಿಕೊಪ್ಪದ ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮಲೆನಾಡು ಬಯಲು ಸೀಮೆಯಾಗುತ್ತಿದೆ. ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಳ್ಳಬೇಕು ಎಂದರು.
ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಇತ್ತೀಚಿನ ವಾತಾವರಣ, ಜೀವನಶೈಲಿ, ಆಹಾರ ಪದ್ಧತಿಯಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಸಾರ್ವಜನಿಕರು ಉತ್ತಮ ಪರಿಸರದಲ್ಲಿ ವಾಯುವಿಹಾರ, ವ್ಯಾಯಾಮ ಮಾಡಲು ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸೂಡಾದಿಂದ 33 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
17 ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನದಲ್ಲಿ 20 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆಸಲಾಗುವುದು. ಪಾರ್ಕ್ ಸ್ವಚ್ಛಗೊಳಿಸಿ ಸಮತಟ್ಟು ಮಾಡುವುದು, ಫೌಂಡೇಷನ್ ಸಹಿತ ಕಾಂಕ್ರೀಟ್ ಪಿಲ್ಲರ್‌ನೊಂದಿಗೆ ಚೈನ್ ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಸಲಾಗುವುದು ಎಂದರು.
ಸ್ವಾಮಿ ವಿವೇಕಾನಂದ ಬಡಾವಣೆ ಇ-ಬ್ಲಾಕ್ ಉದ್ಯಾನದಲ್ಲಿ 20 ಲಕ್ಷ ರೂ. ಮೊತ್ತದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 11 ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಸಲಾಗುವುದು. ಸಂಪ್ ನಿರ್ಮಾಣ ಮಾಡಲಾಗುವುದು. ಫೆನ್ಸಿಂಗ್ ದುರಸ್ತಿ ಪಡಿಸಲಾಗುವುದು ಎಂದು ತಿಳಿಸಿದರು.
ಎಇಇ ಬಸವರಾಜ್, ಇಂಜಿನಿಯರ್ ದಿನೇಶ್, ಸ್ವಾಮಿ ವಿವೇಕಾನಂದ ಬಡಾವಣೆ ಇ-ಬ್ಲಾಕ್ ನಿವಾಸಿಗಳಾದ ವಿ.ಟಿ.ಅರುಣ್, ಎನ್.ಆರ್.ವೆಂಕಟೇಶ್ ಇತರರಿದ್ದರು.