More

    ಎಳ್ಳುಪುರ ಸರ್ಕಾರಿ ಶಾಲೆಗೆ ಕಸದ ಶಾಪ

    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
    ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಳ್ಳುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂದೆ ದಿನೇದಿನೆ ಕಸದ ರಾಶಿ ಹೆಚ್ಚುತ್ತಿದ್ದು, ಶಾಲಾ ಮಕ್ಕಳಿಗೆ ಕಸದ ವಾಸನೆ ಶಾಪವಾಗಿ ಪರಿಣಮಿಸಿದೆ.
    ಹಸಿ ಹಾಗೂ ಒಣಕಸ ಮಿಶ್ರಣಗೊಂಡು ಗಬ್ಬುನಾರುತ್ತಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸ ಮಳೆನೀರಿನೊಂದಿಗೆ ಬೆರೆತು ದುರ್ವಾಸನೆಗೆ ಕಾರಣವಾಗುತ್ತಿದೆ. ಜತೆಗೆ ಕಸದ ಲಿಜೆಟ್ ರಸ್ತೆಯಲ್ಲಿ ಹರಿಯುತ್ತಿದ್ದು, ಶಾಲಾ ವಾತಾವರಣವೇ ಮಲಿನಗೊಳ್ಳುವಂತಾಗಿದೆ.
    ಈ ಬಗ್ಗೆ ಗ್ರಾಮಸ್ಥರು ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕಂದಾಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಕಸ ವಿಲೇವಾರಿ ವಾಹನಗಳು ಇತ್ತ ಸುರಿಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು ಪಟ್ಟಣ ಪಂಚಾಯಿಯಾದ ಬಳಿಕ ಇವೆಲ್ಲ ಅವ್ಯವಸ್ಥೆ ಹೆಚ್ಚಾಗಿದೆ. ಪಂಚಾಯಿತಿ ಸಿಬ್ಬಂದಿ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಪ್ರತಿಭಟನೆ ಎಚ್ಚರಿಕೆ:
    ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಹಳ್ಳಿಗಳ ಅಭಿವೃದ್ಧಿ ಕುಂಠಿತವಾಗಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಪಪಂ ವ್ಯಾಪ್ತಿಯ ಹಳ್ಳಿಗಳು ಕಸದ ರಾಶಿಯಿಂದ ತುಂಬಿ ಮಲಿನವಾಗಿವೆ. ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುಬೇಕು. ಶಾಲೆಯ ಬಳಿ ಕಸ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.


    ಪ್ರತಿ ದಿನ ಕಸದ ವಾಹನ ಮನೆಗಳ ಬಳಿ ಬಂದು ಒಣ ಕಸ ಮತ್ತು ಹಸಿ ಕಸ ಸಂಗ್ರಹ ಮಾಡಬೇಕು ಇಲ್ಲವಾದಲ್ಲಿ ಕಸ ತುಂಬಲು ವಾಹನ ಬಂದರೆ ನಮ್ಮಗ್ರಾಮದಿಂದ ಹೊರಗೆ ಬಿಡುವುದಿಲ್ಲ. ವಾಹನ ಅಡ್ಡಗಟ್ಟಿ ಪ್ರತಿಭಟನೆ ಮಾಡುತ್ತೇವೆ.
    ಮಹೇಶ್, ಎಳ್ಳುಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts