ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಿಬಿಎಂಪಿ ವ್ಯಾಪ್ತಿಯ ಕಸ ಸೇರಿ ಆಸ್ಪತ್ರೆಗಳ ಬಯೋಮೆಡಿಕಲ್ ತ್ಯಾಜ್ಯದ ರಾಶಿ ತಂದು ಕಸ ಸಂಸ್ಕರಣೆ ನೆಪದಲ್ಲಿ ಬೆಂಕಿ ಹಾಕಿ ಕಸ ಸುಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದು, ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯ ಅವ್ಯಾಹತವಾಗಿದೆ. ರಾತ್ರೋ ರಾತ್ರೋ ಲೋಡ್‌ಗಟ್ಟಲೇ ಕಸದ ರಾಶಿ ತಂದು ಬೆಂಕಿ ಹಚ್ಚಲಾಗುತ್ತಿದೆ. ಕಸ ಸಂಸ್ಕರಣೆ ಜತೆಗೆ ಕಸವನ್ನು ಕರಗಿಸುವ ಹುನ್ನಾರ ಇದಾಗಿದ್ದು, ಗ್ರಾಮೀಣ ಭಾಗದ ಪರಿಸರ ಮಲಿನಗೊಳ್ಳುತ್ತಿದೆ ಇದರಿಂದ ಗ್ರಾಮೀಣ ಭಾಗದ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೊಮ್ಮನಬಂಡೆ ಸ್ಪಾಟ್: ಹೊಸಕೋಟೆ ತಾಲೂಕು ಜಡಿಗೆನಹಳ್ಳಿ ಹೋಬಳಿ ಖಾಜಿಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಬಂಡೆ ಹೊರವಲಯ ಕಸದ ಬ್ಲ್ಯಾಕ್‌ಸ್ಪಾಟ್ ಆಗಿದ್ದು, ಪ್ರತಿನಿತ್ಯ ಲೋಡ್ ಕಟ್ಟಲೆ ತ್ಯಾಜ್ಯದ ತಂದು ಸುರಿಯಲಾಗುತ್ತಿದೆ, ಆಸ್ಪತ್ರೆಗಳಲ್ಲಿ ಬಳಸಿದ ಸಿರಿಂಜ್, ಗ್ಲೌಸ್, ಔಷಧಿಗಳ ಬಾಟಲಿ ಸೇರಿಇತರೆ ವಸ್ತುಗಳನ್ನು ತೆರೆದ ಮೈದಾನದಲ್ಲಿ ಸುಡುವುದರಿಂದ ದಟ್ಟವಾದ ಹೊಗೆ ಸುತ್ತಲಿನ ಪರಿಸರವನ್ನು ನಾಶ ಮಾಡುತ್ತಿದೆ. ಕಲುಷಿತ ಗಾಳಿಯನ್ನು ಸೇವಿಸಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಡ್ಡಿಗೇನಹಳ್ಳಿ-ಬೊಮ್ಮನಬಂಡೆ ನಡುವೆ ಇರುವ ಎಚ್‌ಎಎಲ್ ಮೂಲದ ವ್ಯಕ್ತಿಯೊಬ್ಬರ ಖಾಸಗಿ ಜಮೀನಿನಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ ಲೋಡ್‌ಗಟ್ಟಲೇ ವೈದ್ಯಕೀಯ ತ್ಯಾಜ್ಯ ತಂದು ಸುರಿಯಲಾಗುತ್ತಿದೆ, ಇದರಲ್ಲಿ ಉಪಯೋಗವಾಗುವ ವಸ್ತುಗಳನ್ನು ಬೇರ್ಪಡಿಸಿ ಉಳಿದ ತ್ಯಾಜ್ಯವನ್ನು ಸುಟ್ಟುಹಾಕುವ ಕೆಲಸ ನಡೆಯುತ್ತಿದೆ.
ದೂರು ನೀಡಿದರೂ ಪ್ರಯೋಜನವಿಲ್ಲ: ವೈದ್ಯಕೀಯ ತ್ಯಾಜ್ಯವನ್ನು ಸುಡುತ್ತಿರುವ ದೃಶ್ಯ ಕಂಡ ಸ್ಥಳೀಯರು ಲಾರಿ ಸಮೇತ ವಾಹನ ಚಾಲಕರ ಹಾಗೂ ಸಿಬ್ಬಂದಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಎಷ್ಟೋ ಬಾರಿ ಪೊಲೀಸ್ ಠಾಣೆ, ನಗರಸಭೆ ಸೇರಿ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೋಬ್ಬರೂ ಈ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಸ್ಥಳೀಯರು ಅರೋಪಿಸಿದ್ದಾರೆ.
ತೋಟಗಳಲ್ಲಿ ಬೆಳೆ ನಾಶ: ರಾಶಿಗಟ್ಟಲೆ ವೈದ್ಯಕೀಯ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಸುಡುತ್ತಿರುವುದರಿಂದ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದೆ, ಇದರಿಂದ ಈಭಾಗದ ಸುತ್ತಮುತ್ತಲ ತೋಟಗಳಲ್ಲಿ ಬೆಳೆ ನಾಶವಾಗುತ್ತಿದೆ, ಕೊಳವೆಬಾವಿಗಳಲ್ಲಿ ರಾಸಾಯನಿಕಯುಕ್ತ ನೀರು ಬರುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಸುಡುವ ವೇಳೆ ಗಾಳಿಗೆ ಹಾರಾಡಿಕೊಂಡು ಪಕ್ಕದ ಕೆರೆಗೆ ಬೀಳುತ್ತಿದೆ, ಇದರಿಂದ ಕೆರೆಯಲ್ಲಿನ ನೀರು ಕಲುಷಿತವಾಗುತ್ತಿದೆ, ಕೆರೆ ನೀರು ಕುಡಿದ ಜಾನುವಾರುಗಳಲ್ಲಿ ಹಲವು ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ರೈತರು ದೂರಿದ್ದಾರೆ.
ಆರೋಗ್ಯ ಸಚಿವಾಲಯದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಭಾರತದಲ್ಲಿ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಗೆ ಗಮನ ನೀಡಲಾಗುತ್ತದೆ, ಬಯೋಮೆಡಿಕಲ್ ತ್ಯಾಜ್ಯವನ್ನು ವಿಭಿನ್ನ ವಿಧಾನಗಳನ್ನು ಬಳಸಿ ವಿಲೇವಾರಿ ಮಾಡಬೇಕು. ಆದರೆ ಗ್ರಾಮೀಣ ಭಾಗದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ರೀತಿ ಗುತ್ತಿಗೆ ಪಡೆದು ಹಣದ ಆಸೆಗೆ ಈ ರೀತಿ ತೆರೆದ ಪ್ರದೇಶದಲ್ಲಿ ಸುಡುತ್ತಿರುವುದು ಕಾನೂನು ಬಾಹಿರವಾಗಿದೆ. ಇಷ್ಟಾದರೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಮುನೇಗೌಡ, ಬೊಮ್ಮನಬಂಡೆ