ಬೆಂಗಳೂರು-ಮಂಗಳೂರು ಅಂತರ ಹೆಚ್ಚಿಸಿದ ಭೂಕುಸಿತ

ವೇಣುವಿನೋದ ಕೆ.ಎಸ್. ಮಂಗಳೂರು
ಮಂಗಳೂರು: ಒಂದೆಡೆ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಸಂಚಾರ ನಿಷೇಧ ಅನಿರ್ದಿಷ್ಟಾವಧಿ ವಿಸ್ತರಣೆ, ಇನ್ನೊಂದೆಡೆ ಸಂಪಾಜೆಯಂತೂ ಸದ್ಯಕ್ಕೆ ಸಂಚಾರಯೋಗ್ಯವಾಗಿಲ್ಲ, ಚಾರ್ಮಾಡಿ ಘಾಟಿಯಲ್ಲಿಯೂ ಸಂಚಾರಕ್ಕೆ ಭಾರಿ ವಾಹನಗಳ ಪರದಾಟ, ಅಷ್ಟೇ ಅಲ್ಲ ಒತ್ತಡ ತಡೆದುಕೊಳ್ಳಲಾಗದೆ ಘಾಟಿ ರಸ್ತೆ ಕೆಟ್ಟಿದೆ….
ಇದರಿಂದಾಗಿ ಪ್ರಸ್ತುತ ಕುದುರೆಮುಖ ರಸ್ತೆಯ ಮೇಲೆ ಭಾರಿ ಒತ್ತಡ ಬೀಳುತ್ತಿದೆ, ಭೂಕುಸಿತವೂ ಕಾಡುತ್ತಿದೆ.
ಈ ಬಾರಿ ಬಿದ್ದಿರುವ ಅತಿವೃಷ್ಟಿಯಿಂದಾಗಿ ಬೆಂಗಳೂರು-ಮಂಗಳೂರು ಬೆಸೆಯುವ ಎಲ್ಲಾ ಘಾಟಿ ರಸ್ತೆಗಳು ಇನ್ನಿಲ್ಲದ ರೀತಿ ಹಾನಿಗೊಳಗಾಗಿದ್ದರಿಂದ ಕರಾವಳಿ ಹಾಗೂ ಬೆಂಗಳೂರಿನ ಮಧ್ಯೆ ಅಂತರ ಹೆಚ್ಚಿಸಿದೆ.
ಸದ್ಯ ಚಾರ್ಮಾಡಿ ಘಾಟಿಯೊಂದರಲ್ಲೇ ಮಲ್ಟಿ ಎಕ್ಸಿಲ್ ಹೊರತುಪಡಿಸಿದಂತೆ ಕಾರ್ ಸಹಿತ ಲಘುವಾಹನಗಳು ಸಂಚರಿಸುತ್ತಿವೆ. ಉಳಿದೆಲ್ಲ ಭಾರಿ ವಾಹನಗಳನ್ನೂ ಮಾಳ ಘಾಟಿ ಮೂಲಕ ಕಳುಹಿಸಲಾಗುತ್ತಿದೆ. ಇದರಿಂದ ಮಾಳ ಘಾಟಿ ರಸ್ತೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮಲ್ಟಿ ಆಕ್ಸಿಲ್ ಬಸ್‌ಗಳು, ಲಾರಿಗಳ ಸಂಚಾರದಿಂದ ರಸ್ತೆ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಈ ಮಾರ್ಗದಲ್ಲಿ ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನ ಕಳಸದಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಮಂಗಳೂರು- ಬೆಂಗಳೂರು ಮಧ್ಯೆ ವೋಲ್ವೋ ಬಸ್ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು. ಚಾರ್ಮಾಡಿ ಘಾಟಿನಲ್ಲಿ ಆಗಾಗ ಸಂಚಾರ ದಟ್ಟಣೆ ತಲೆದೋರುತ್ತಿದೆ. ಚಾರ್ಮಾಡಿ, ಶಿರಾಡಿ ಘಾಟಿಯಲ್ಲಿ ಕಂಡುಬಂದ ಭೂಕುಸಿತ ಕುದುರೆಮುಖದಲ್ಲಿಯೂ ಉಂಟಾದರೆ ಸಂಪರ್ಕದ ಮತ್ತೊಂದು ಕೊಂಡಿ ಕುಸಿದಂತಾಗಲಿದೆ.

ರೈಲು ಸಂಪರ್ಕವೂ ಕಷ್ಟ:  ಶಿರಿಬಾಗಿಲು ಸಮೀಪದ ಎಡಕುಮೇರಿಯಲ್ಲಿ ಸತತ ಗುಡ್ಡ ಕುಸಿತ ರೈಲು ಹಳಿಗೆ ತೊಂದರೆ ತಂದೊಡ್ಡಿದ್ದು, ಹಲವು ದಿನಗಳಿಂದ ಮಂಗಳೂರು-ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳ ಪ್ರಕಾರ, ಮಳೆ ಸಂಪೂರ್ಣ ನಿಂತ ಮೇಲೆ ಇವುಗಳನ್ನು ಯಥಾಸ್ಥಿತಿಗೆ ತರಲು ಇನ್ನೂ ಹಲವು ದಿನ ಬೇಕು.

ಶಿರಾಡಿ ಒಂದು ತಿಂಗಳಿಗಿಲ್ಲ:  ಶಿರಾಡಿ ಘಾಟಿ ರಸ್ತೆಯಲ್ಲಿ 11 ಕಡೆ ನದಿ ಬದಿಗೆ ರಸ್ತೆ ಕುಸಿದಿದೆ. ಇದರಲ್ಲಿ ಐದು ಕಡೆ ಕುಸಿದ ಕಡೆ ರಿಟೇನಿಂಗ್ ವಾಲ್ ನಿರ್ಮಿಸಲಾಗಿದೆ. ಉಳಿದ ಕಡೆ ಕೆಲಸ ನಡೆಯುತ್ತಿದೆ. ಹಾಗಾಗಿ ಭಾರಿ ವಾಹನಗಳನ್ನು ಸದ್ಯಕ್ಕಂತೂ ಬಿಡುವಹಾಗಿಲ್ಲ. ಹಾಗಾಗಿ ಇನ್ನೊಂದು ತಿಂಗಳ ಮಟ್ಟಿಗೆ ಭಾರಿ ವಾಹನಗಳ ಸಂಚಾರ ಇಲ್ಲಿ ಕಷ್ಟ. ಲಘುವಾಹನಗಳನ್ನು ಕೆಲ ದಿನಗಳಲ್ಲಿ ಬಿಡುವ ಬಗ್ಗೆ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಬೇಕಷ್ಟೆ.

ಮಾಳ ಘಾಟಿ ರಸ್ತೆ ಅಥವಾ ಇತರ ಕೆಲವು ಘಾಟಿ ರಸ್ತೆಗಳು ಇಂಡಿಯನ್ ರೋಡ್ ಕಾಂಗ್ರೆಸ್-ಐಆರ್‌ಸಿ ಸೂತ್ರಗಳಂತೆ ನಿರ್ಮಾಣಗೊಂಡದ್ದಲ್ಲ. ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯಹೆದ್ದಾರಿ ಅಥವಾ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಗಿದೆಯಷ್ಟೇ. ಹಾಗಾಗಿ ಅತಿಯಾದ ಲೋಡ್ ಬಿದ್ದರೆ ಅವು ಕೆಟ್ಟು ಹೋಗುವ ಸಾಧ್ಯತೆ ಜಾಸ್ತಿ ಇದೆ. ಮಲ್ಟಿ ಆಕ್ಸಿಲ್ ವಾಹನ ಸಂಚರಿಸಿದರೆ ಒತ್ತಡ ಬೀಳುವುದಕ್ಕಿಂತಲೂ ಎರಡು ಆಕ್ಸಿಲ್ ವಾಹನಗಳು ಅಧಿಕ ಲೋಡ್ ಹಾಕಿದರೆ ರಸ್ತೆಗಳಿಗೆ ಮತ್ತಷ್ಟು ಅಪಾಯ.
-ಬಿ.ಎಸ್.ಬಾಲಕೃಷ್ಣ, ನಿವೃತ್ತ ಪಿಡಬ್ಲುಡಿ ಅಧೀಕ್ಷಕ ಇಂಜಿನಿಯರ್

Leave a Reply

Your email address will not be published. Required fields are marked *