ಗಣಿನಾಡದಲ್ಲಿ ಹೋಳಿ ಹಬ್ಬದ ಸಂಭ್ರಮ, ರಾರಾವಿಯಲ್ಲಿ ವಿಶಿಷ್ಟ ಆಚರಣೆ

ಬಣ್ಣ ಎರಚಾಟದಲ್ಲಿ ಮಿಂದೆದ್ದ ಜನತೆ ಹಂಪಿಯಲ್ಲಿ ವಿದೇಶಿಗರು ಫುಲ್ ಖುಷ್

ಹೊಸಪೇಟೆ: ನಗರ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಮಹಿಳೆಯರು, ಮಕ್ಕಳು, ಯುವರು ಪರಸ್ಪರ ಗೆಳೆಯರು, ಹಿತೈಷಿಗಳಿಗೆ ಬಣ್ಣ ಎರಚುವ ಮೂಲಕ ಹಬ್ಬ ಆಚರಿಸಿದರು.

ಬುಧವಾರ ರಾತ್ರಿ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು, ನಗರದ ವಿವಿಧ ಭಾಗದಲ್ಲಿ ಯುವಕರು, ಮಕ್ಕಳು ಹಲಗೆ ಬಡಿಯುವ ಮೂಲಕ ಹಬ್ಬದ ಮೆರಗು ಹೆಚ್ಚಿಸಿದರು. ಗುರುವಾರ ಬೆಳಗ್ಗೆ ಕಾಮ ದಹನದ ನಂತರ ಬಣ್ಣದೋಕುಳಿಯಲ್ಲಿ ಜನರು ಮಿಂದೆದ್ದರು. ಆಕಾಶವಾಣಿ ಕೇಂದ್ರ, ಎಸಿ ಕಚೇರಿ ರಸ್ತೆ, ರೋಟರಿ ವೃತ್ತ, ಮೃತ್ಯುಂಜಯ ನಗರ ಸೇರಿ ವಿವಿಧೆಡೆ ಪರಸ್ಪರ ಬಣ್ಣ ಎರಚಾಟದಲ್ಲಿ ಮಹಿಳೆಯರು, ಮಕ್ಕಳು ತೊಡಗಿದ್ದರು. ಕೆಲ ಯುವಕ, ಯುವತಿಯರು ಬೀದಿಗಳಲ್ಲಿ ಬೈಕ್‌ಗಳಲ್ಲಿ ಸುತ್ತಾಡಿ ಸಂಭ್ರಮಿಸಿದರು.

ಬಣ್ಣದಾಟದಲ್ಲಿ ತೊಡಗಿದ್ದ ಯುವಕರು ನಗರದ ರೈಲು ನಿಲ್ದಾಣ ರಸ್ತೆಯಲ್ಲಿನ ಕಾಲುವೆ, ತುಂಗಭದ್ರಾ ಜಲಾಶಯದ ಗುಂಡಾ ಅರಣ್ಯ ಪ್ರದೇಶದಲ್ಲಿನ ಹಿನ್ನೀರಿನಲ್ಲಿ ಸ್ನಾನ ಮಾಡಿದರು. ಅಹಿತಕರ ಘಟನೆಗಳು ನಡೆಯದಂತೆ ನಗರದ ಮಸೀದಿ ವೃತ್ತ, ಮದಕರಿ ನಾಯಕ, ರೋಟರಿ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಮಹಿಳೆಯರ ವೇಷತೊಟ್ಟು ಹೆಜ್ಜೆ ಹಾಕುವ ಪುರುಷರು
ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಕಾಮನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹುಣ್ಣಿಮೆ ಒಂದು ದಿನ ಮುಂಚಿತ ಯುವಕರು ಕಬ್ಬಿನ ಜಲ್ಲೆ ಹಿಡಿದು ಗ್ರಾಮದ ತುಂಬೆಲ್ಲ ಸುತ್ತಾಡಿ ಕಾಮನ ಹಬ್ಬದ ಸಂಕೇತವನ್ನು ನೀಡಿದರು. ಬಳಿಕ ಹಿರಿಯರೆಲ್ಲರೂ ಸೇರಿ ಗ್ರಾಮದ ಉರುವಕೊಂಡ ಮಠದಲ್ಲಿ ರತಿ ಮನ್ಮಥ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಉದ್ಭವ ಲಿಂಗವಿರುವ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯುವಕರು ಕೊಡೆಗಳನ್ನು ಹಿಡಿದು ಕಾಲಿಗೆ ಗೆಜ್ಜೆಕಟ್ಟಿಕೊಂಡು ಹೆಜ್ಜೆ ಹಾಕಿದರು. ವಿವಿಧ ಜಾನಪದ ಸಂಪ್ರದಾಯಗಳಲ್ಲಿ ಕಾಣುಸಿಗುವ ಅಲೆಮಾರಿ ಭಿಕ್ಷಾಟನೆ ಮಾದರಿಯಲ್ಲಿ ಯುವಕರು ಬುಡುಬುಡಿಕೆ, ವೇಷಗಾರರು, ಕಳ್ಳ ಪೊಲೀಸ್ ವೇಷ, ಕಾಡುಪಾಪ ಮತ್ತಿತರ ವೇಷ ಗಳನ್ನು ತೊಟ್ಟು ಮನೆ ಮನೆಗೆ ತೆರಳಿ ದವಸ ಧಾನ್ಯ, ಕಾಣಿಕೆಗಳನ್ನು ಸಂಗ್ರಹಿಸಿದರು. ಮಧ್ಯಾಹ್ನ ಸಮೀಪಿಸುತ್ತಿದ್ದಂತೆ ಯುವಕರು, ಮಹಿಳೆಯರ ವೇಷತೊಟ್ಟು ರಸ್ತೆಯಲ್ಲಿ ತಿರುಗಾಡಿ ಹಬ್ಬದ ಕಳೆಯನ್ನು ಹೆಚ್ಚಿಸಿದರು. ರಾತ್ರಿ ಕಾಮನ ದಹನ ಮಾಡಿದರು. ಇದಕ್ಕೂ ಮುನ್ನ ರತಿ ಮತ್ತು ಮನ್ಮಥನ ಅಗಲಿಕೆಯನ್ನು ಸಹಿಸದೆ ಯುವಕರು ವಿರಹದಿಂದ ದು:ಖ ಭರಿತ ಶೋಕದ ಹಾಡುಗಳನ್ನು ಹಾಡಿದರು.