ಕೊಲ್ಹಾರ: ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯ ಅನುಷ್ಠಾನ, ನೊಂದಣಿ, ಅಧಿಕೃತ ಕಚೇರಿ ಹಾಗೂ ಹೆಚ್ಚಿನ ಅನುದಾನ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ರಾಜ್ಯ ಗಾಣಿಗ ಮಹಾಸಭಾ ಅಧ್ಯಕ್ಷ ಆನಂದ ಕೆ. ಮಂಡ್ಯ ಹೇಳಿದರು.
ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ಗಾಣಿಗ ಸಮಾಜ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿಲ್ಲ. ಹಲವಾರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಗಾಣಿಗ ಸಮಾಜವನ್ನು ಸುವರ್ಣ ಸೌಧದ ಕಡೆಗೆ ತಂದು ಡಿ.18 ರಂದು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡುತ್ತೇವೆ ಎಂದರು.
ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಮಾತನಾಡಿ, ಗಾಣಿಗ ಸಮಾಜದ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಒದಗಿಸಿ ಗಾಣಿಗರನ್ನು ಮೇಲೆತ್ತಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ನಂದು ಗಡಗಿ, ಸಚಿನ್ ಕೆಲುಡಿ, ಸಂಗಪ್ಪ ಅಥಣಿ, ಭೀಮಪ್ಪ ಏಳಗಂಟಿ ಇತರರಿದ್ದರು.