ಜಾನಪದ ಕಲಾತಂಡದಿಂದ ಮತದಾನ ಜಾಗೃತಿ

ಬಾಗಲಕೋಟೆ:ಮತದಾರರನ್ನು ಮತಗಟ್ಟೆಗೆ ಸೆಳೆಯಲು, ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸಲು ಜಿಲ್ಲಾ ಸ್ವೀಪ್ ಯೋಜನೆಯಡಿ ಹಮ್ಮಿಕೊಂಡ ವಿವಿಧ ಜಾನಪದ ಕಲಾತಂಡಗಳ ಮತದಾನ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಅಭಿಯಾನ ಜಿಲ್ಲಾಡಳಿತ ಭವನದಿಂದ ಆರಂಭವಾಗಿ ನವನಗರದ ಬಸ್ ನಿಲ್ದಾಣ, ಪೊಲೀಸ್ ಪ್ಯಾಲೇಸ್, ಎಲ್‌ಐಸಿ ಸರ್ಕಲ್, ಜಿಲ್ಲಾ ಕೋರ್ಟ್ ಮಾರ್ಗವಾಗಿ ಕಲಾಭವನಕ್ಕೆ ತಲುಪಿ ಮುಕ್ತಾಯಗೊಂಡಿತು. ಈ ಅಭಿಯಾನದಲ್ಲಿ 36 ಕ್ಕೂ ಹೆಚ್ಚು ವಿವಿಧ ಜಾನಪದ ಕಲಾತಂಡಗಳು ಭಾಗವಹಿಸುವ ಮೂಲಕ ಅಭಿಯಾನಕ್ಕೆ ಮೆರಗು ತಂದವು.

ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹಾಗೂ ಜಿ.ಪಂ. ಸಿಇಒ ಗಂಗೂಬಾಯಿ ಮಾನಕರ ಸಾಂಪ್ರದಾಯಿಕ ರುಮಾಲು ಸುತ್ತಿಕೊಂಡು ವಿವಿಧ ಜಾನಪದ ಕಲಾತಂಡಗಳೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡು ಚಕ್ಕಡಿ ಏರಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೆ, ಘೋಷಣಾ ಲಕಗಳನ್ನು ಹಿಡಿದುಕೊಂಡು ಗಮನ ಸೆಳೆದರು. ಚುನಾವಣೆ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಅಭಿಯಾನದಲ್ಲಿ ಕುದುರೆ ಕುಣಿತ, ದುರುಗಮುರಗಿ, ಮರಗಾಲು, ಸರಸ್ವತಿ ನವಿಲು ಕುಣಿತ, ರಾವಾಳ ಮುಖ ಪ್ರದರ್ಶನ, ಕರಡಿ ಮಜಲು, ಡೊಳ್ಳು ಕುಣಿತ, ಹಲಗೆ ಮೇಳ ಸೇರಿ ವಿವಿಧ ಜಾನಪದ ಕಲಾತಂಡಗಳು ಆಕರ್ಷಿಸಿದವು. 15 ಚಕ್ಕಡಿಗಳು, 10 ಟಾಂಗಾಗಳನ್ನು ಮತದಾನ ಫಲಕಗಳೊಂದಿಗೆ ವಿಶೇಷವಾಗಿ ಶೃಂಗರಿಸಲಾಗಿತ್ತು. ಲಂಬಾಣಿ ನೃತ್ಯ, ಲೇಜಿಮ್ ಡ್ಯಾನ್ಸ್‌ಗಳು ಅಭಿಯಾನಕ್ಕೆ ಹುರುಪು ತುಂಬಿದವು. ಅಭಿಯಾನ ವೀಕ್ಷಿಸಲು ಬಂದ ಸಾರ್ವಜನಿಕರಿಗೆ ಮತದಾನ ಮಹತ್ವ, ಕಡ್ಡಾಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ರಂಗೋಲಿ ಮೂಲಕ ಮಾದರಿ ಮತದಾನದ ಬ್ಯಾಲೆಟ್ ಬಿಡಿಸಿದ್ದು ಹಾಗೂ ಮಾರ್ಗದುದ್ದಕ್ಕೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ರಂಗೋಲಿಯಲ್ಲಿ ಜಾಗೃತಿ ಸಂದೇಶಗಳನ್ನು ಬರೆದಿದ್ದು ಗಮನ ಸೆಳೆಯಿತು.

ಸಹಾಯಕ ಚುನಾವಣಾಧಿಕಾರಿ ಶಶಿಧರ ಕುರೇರ, ಜಿ.ಪಂ ಉಪ ಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಜಿ.ಪಂ. ಸಿಪಿಒ ನಿಂಗಪ್ಪ ಗೋಠೆ, ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಯಶ್ರೀ ಎಮ್ಮಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂವಿಧಾನದಲ್ಲಿ ಮತದಾನಕ್ಕೆ ದೊಡ್ಡ ಮಹತ್ವ ನೀಡಲಾಗಿದೆ. ಎಲ್ಲರೂ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸುಭದ್ರ ಸರ್ಕಾರ ರಚಿಸಲು ತಪ್ಪದೇ ಮತದಾನ ಮಾಡುವುದರ ಜತೆಗೆ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು.
-ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ

ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಸಂವಿಧಾನದಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನ ಹಕ್ಕನ್ನು ನೀಡಿದ್ದು, ಈ ಚುನಾವಣಾ ಹಬ್ಬದಲ್ಲಿ ತಪ್ಪದೇ ಮತದಾನ ಮಾಡುವುದರ ಜತೆಗೆ ಇತರರಿಗೆ ಸ್ಫೂರ್ತಿಯಾಗಿ.
-ಗಂಗೂಬಾಯಿ ಮಾನಕರ ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಕಾರ್ಯಕ್ರಮ ಅಧ್ಯಕ್ಷೆ

Leave a Reply

Your email address will not be published. Required fields are marked *