More

    ಪಟ್ಟಣ ಪಂಚಾಯಿತಿಯಾಗದ ಗಂಗೊಳ್ಳಿ

    ಗಂಗೊಳ್ಳಿ: ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆಗಳನ್ನು ಹೊಂದಿದ್ದ ಗಂಗೊಳ್ಳಿ ಗ್ರಾಮ ಪಂಚಾಯಿತಿ ಕನಸು ನುಚ್ಚುನೂರಾಗಿದ್ದು, ಸದ್ಯ ಗಂಗೊಳ್ಳಿ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರುವ ಯಾವುದೇ ಲಕ್ಷಣಗಳಿಲ್ಲ.

    2011ರ ಜನಗಣತಿ ಪ್ರಕಾರ ಸುಮಾರು 13014 ಜನಸಂಖ್ಯೆ ಹೊಂದಿರುವ ಕುಂದಾಪುರ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ಆಗಿ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳ ಹಿಂದಿನದ್ದು.

    ಸರ್ಕಾರದ ಮಾನದಂಡದ ಆಧಾರದಂತೆ ಗಂಗೊಳ್ಳಿಯ ಜನಸಂಖ್ಯೆ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಲು ಅರ್ಹತೆ ಹೊಂದಿದ್ದರೂ, ಸರ್ಕಾರಗಳು ಮಾತ್ರ ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಂಡಿಲ್ಲ. ಇಲ್ಲಿ ಉದ್ಯೋಗಾವಕಾಶಗಳ ಶೇಕಡಾವಾರು ಪ್ರಮಾಣ ಶೇ.80ರಷ್ಟಿದ್ದರೆ, ಕೃಷಿಯೇತರ ಚಟುವಟಿಕೆಗಳು ಶೇ.65ರಷ್ಟಿದೆ. ಕೃಷಿ ಚಟುವಟಿಕೆಗಳು ಶೇ.10ರಷ್ಟಿದ್ದು, ವಾರ್ಷಿಕ ತಲಾ ಆದಾಯ 21736 ರೂಪಾಯಿ ಆಗಿದೆ. ಬೃಹತ್ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಾಂದ್ರತೆ ಏರಿಕೆ ಆಗುತ್ತಿದ್ದು, ಕೃಷಿಯೇತರ ಭೂಮಿಗಳ ಹೆಚ್ಚಳಗಳು, ಜನವಸತಿ ಪ್ರದೇಶಗಳ ಅಭಿವೃದ್ಧಿ ಚಟುವಟಿಕೆಗಳು ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಪೂರಕ ಅಂಶಗಳಾಗಿತ್ತು.

    ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಮತ್ತು ಸೌಹಾರ್ದ ಸಹಕಾರಿ ಸಂಸ್ಥೆಗಳು, ಐಸ್ ಪ್ಲಾಂಟ್, ನರ್ಸಿಂಗ್ ಹೋಮ್, ಪದವಿಪೂರ್ವ ಕಾಲೇಜು, ಪ್ರೌಢಶಾಲೆಗಳು, ಮೀನುಗಳ ರಫ್ತು ಕಂಪನಿ, ಅನೇಕ ದೇವಾಲಯಗಳು, ಚರ್ಚ್, ಮಸೀದಿಗಳನ್ನು ಹೊಂದಿರುವ ಗಂಗೊಳ್ಳಿ ಗ್ರಾಮದಲ್ಲಿ ಅನೇಕ ಉತ್ಸವ, ಸಮಾರಂಭಗಳು ನಿರಂತರವೆಂಬಂತೆ ನಡೆಯುತ್ತಲೇ ಇರುತ್ತದೆ. ಮೀನುಗಾರಿಕೆಯೇ ಈ ಭಾಗದ ಜನರ ಪ್ರಮುಖ ಕಸುಬಾಗಿದ್ದು, ಹೆಚ್ಚಿನ ಆರ್ಥಿಕ ಬೆಳವಣಿಗೆಗಳನ್ನು ಕಾಣುವ ಅವಕಾಶಗಳನ್ನು ಗಂಗೊಳ್ಳಿ ಹೊಂದಿತ್ತು.

    ಈ ಎಲ್ಲ ಕಾರಣಗಳಿಂದ ಹಾಗೂ ಗಂಗೊಳ್ಳಿಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗಂಗೊಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಅನೇಕ ವರ್ಷಗಳಿಂದ ವಿವಿಧ ಸರ್ಕಾರಗಳ ಮುಂದೆ ಬೇಡಿಕೆ ಇಡಲಾಗಿತ್ತು. ಈ ಹಿಂದೆ ಅನೇಕ ಗ್ರಾಮಸಭೆಗಳಲ್ಲಿ ಸಾರ್ವಜನಿಕರು ಈ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಿದ್ದರು. ಸ್ಥಳೀಯವಾಗಿಯೂ ಅನೇಕ ಹೋರಾಟಗಳು ನಡೆದಿದ್ದವು. ಜನರ ಬೇಡಿಕೆ ಮತ್ತು ಒತ್ತಾಯಕ್ಕೆ ಮಣಿದ ಈ ಭಾಗದ ಜನಪ್ರತಿನಿಧಿಗಳು ಗಂಗೊಳ್ಳಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸುವ ಭರವಸೆ ನೀಡುತ್ತಲೇ ಬಂದಿದ್ದರು. ಇದಕ್ಕೆ ಪೂರಕವಾಗಿ ಎರಡು ಬಾರಿ ಜಿಲ್ಲಾಡಳಿತ ಸಂಬಂಧಪಟ್ಟ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರಿಂದ ಜನರಲ್ಲಿ ಸಹಜವಾಗಿ ಪಟ್ಟಣ ಪಂಚಾಯಿತಿ ಆಸೆ ಚಿಗುರೊಡೆದಿತ್ತು.

    ಆದರೆ ಜನಪ್ರತಿನಿಧಿಗಳ ಭರವಸೆ ಕಡತದಲ್ಲೇ ಉಳಿದುಕೊಂಡಿದೆ. ರಾಜ್ಯ ಸರ್ಕಾರ ಅಚ್ಚರಿಯೆಂಬಂತೆ ಬೈಂದೂರನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿರುವುದು ಗಂಗೊಳ್ಳಿ ಜನರ ಆಸೆ ಮಣ್ಣುಪಾಲಾಗಿದೆ. ಇನ್ನು ಎರಡು ವರ್ಷ ಯಾವುದೇ ಹೊಸ ಪಟ್ಟಣ ಪಂಚಾಯಿತಿ ಘೋಷಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಇದರಿಂದ ಗಂಗೊಳ್ಳಿಯು ಪಟ್ಟಣ ಪಂಚಾಯಿತಿ ಆಗಬಹುದೆಂಬ ಗಂಗೊಳ್ಳಿ ಗ್ರಾಮದ ಜನರ ಕನಸು ನುಚ್ಚುನೂರಾಗಿದೆ.

    ಈ ಬಾರಿಯಾದರೂ ಗಂಗೊಳ್ಳಿ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರಬಹುದೆಂಬ ಆಸೆ ಇದ್ದಿತ್ತು. ಶಾಸಕರು ಕೂಡ ಪಟ್ಟಣ ಪಂಚಾಯಿತಿ ಮಾಡುವ ಭರವಸೆ ನೀಡಿದ್ದರು. ಆದರೆ ಸರ್ಕಾರ ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಮುಂದಾಗದಿರುವುದು ಬೇಸರದ ಸಂಗತಿ. ಪಟ್ಟಣ ಪಂಚಾಯಿತಿ ಆಗಲು ಎಲ್ಲ ಅರ್ಹತೆ, ಮಾನದಂಡ ಹೊಂದಿರುವ ಗಂಗೊಳ್ಳಿಯನ್ನು ಅತೀ ಶೀಘ್ರ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಬೇಕು.
    -ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ, ಗಂಗೊಳ್ಳಿ

    ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಗಂಗೊಳ್ಳಿಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗಂಗೊಳ್ಳಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸುವ ಅನಿವಾರ್ಯತೆಯನ್ನು ಸರ್ಕಾರದ ಗಮನಕ್ಕೆ ತಂದು, ಗಂಗೊಳ್ಳಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುವುದು
    ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts