ಗಂಗೊಳ್ಳಿ ಬಂದರು ಮೀನುಗಾರಿಕೆ ಚುರುಕು

ಗಂಗೊಳ್ಳಿ: ಯಾಂತ್ರೀಕೃತ ಮೀನುಗಾರಿಕೆಯ ಮಳೆಗಾಲದ ಎರಡು ತಿಂಗಳ ನಿಷೇಧದ ಅವಧಿ ಮುಗಿದಿದ್ದರೂ ಗಂಗೊಳ್ಳಿ ಬಂದರಿನಲ್ಲಿ ಪ್ರತಿಕೂಲ ಹವಾಮಾನದಿಂದ ವಿಳಂಬಗೊಂಡಿದ್ದ ಮೀನುಗಾರಿಕೆ ಆ.19ರಿಂದ ಆರಂಭಗೊಳ್ಳಲಿದೆ.

ಮೇ ತಿಂಗಳಿನಲ್ಲಿ ಮೀನುಗಾರಿಕೆ ಮುಗಿಸಿ ದಡದಲ್ಲಿ ಲಂಗರು ಹಾಕಿದ್ದ ಬೋಟುಗಳು ಮತ್ತೆ ಕಡಲಿಗಿಳಿಯಲು ಸಜ್ಜಾಗುತ್ತಿವೆ. ಮೀನುಗಾರರು ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿದ್ದಾರೆ. ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಬಳಿ ದಡದಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗಳನ್ನು ಸಮುದ್ರಕ್ಕಿಳಿಸಿ ಮೀನುಗಾರಿಕೆಗೆ ತೆರಳಲು ತಯಾರಿ ನಡೆಸುತ್ತಿದ್ದಾರೆ.

ಗಂಗೊಳ್ಳಿ ಬಂದರಿನ ಮೂಲಕ ಕೆಲವು ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳಿವೆ. ಸೋಮವಾರದಿಂದ ಬಹುತೇಕ ಪರ್ಸಿನ್, ಟ್ರಾಲ್ ಬೋಟುಗಳು ಕಡಲಿಗಿಳಿಯುವ ಸಾಧ್ಯತೆ ಇದೆ.
ಸುಮಾರು 60 ಸಣ್ಣ ಟ್ರಾಲ್‌ಬೋಟ್, 35ರಿಂದ 40 ತ್ರಿ ಸೆವೆಂಟಿ, 40ಕ್ಕೂ ಹೆಚ್ಚು ಪರ್ಸಿನ್ ಬೋಟ್, ನೂರಾರು ಗಿಲ್ ನೆಟ್, ಮಾಟು ಬಲೆ, ಬೀಡುಬಲೆ, ಪಾತಿ ದೋಣಿಗಳು ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತವೆ. ಕಳೆದ ಮೀನುಗಾರಿಕಾ ವರ್ಷದಲ್ಲಿ ಹವಾಮಾನ ವೈಪರೀತ್ಯ, ಚಂಡಮಾರುತ, ಲೈಟ್ ಫಿಶಿಂಗ್ ನಿಷೇಧ, ಮೀನುಗಳಿಗೆ ಗೋವಾ ರಾಜ್ಯದಲ್ಲಿ ನಿಷೇಧ ಮೊದಲಾದ ಸಮಸ್ಯೆ ಎದುರಿಸಿದ್ದರು.

ಸಿದ್ಧಗೊಳ್ಳದ ಬಂದರು: ಸೋಮವಾರ ಅಧಿಕೃತವಾಗಿ ಮೀನುಗಾರಿಕೆ ಆರಂಭವಾಗಲಿದ್ದರೂ ಬಂದರು ಪ್ರದೇಶದಲ್ಲಿ ಇದಕ್ಕೆ ಪೂರಕವಾದ ಸಿದ್ಧತೆಗಳು ನಡೆದಿಲ್ಲ. ಬಂದರಿನ ಎರಡೂ ಹರಾಜು ಪ್ರಾಂಗಣದಲ್ಲಿ ಕಸ, ಕಡ್ಡಿ, ತ್ಯಾಜ್ಯಗಳು ತುಂಬಿಕೊಂಡಿವೆ. ಜೆಟ್ಟಿ ಸೇರಿದಂತೆ ಇಡೀ ಬಂದರು ಪ್ರದೇಶದಲ್ಲಿ ಶುಚಿತ್ವ ನಡೆದಿಲ್ಲ. ಹರಾಜು ಪ್ರಾಂಗಣದ ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗಾಗಿದ್ದು ಕುಸಿಯುವ ಭೀತಿ ಇದೆ.

 ದುರಸ್ತಿಯಾಗದ ಜೆಟ್ಟಿ: ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ಕುಸಿದು ಹಲವು ಸಮಯ ಕಳೆದಿದೆ. ದುರಸ್ತಿಗೆ ಕಳೆದ ಜೂನ್‌ನಲ್ಲಿ ಬಂದರು ಮತ್ತು ಮೀನುಗಾರಿಕೆ ಇಲಾಖೆಯಂದ ಅನುದಾನ ಮಂಜೂರಾಗಿದೆ. ಈ ವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ. ಇಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಮೀನುಗಾರಿಕೆ ಮುಗಿಸಿ ಬರುವ ಬೋಟ್‌ಗಳಿಂದ ಮೀನು ಇಳಿಸಲು ಜಾಗದ ಸಮಸ್ಯೆ ಇದೆ.

Leave a Reply

Your email address will not be published. Required fields are marked *