ಬೀಚ್ ಅಂದ ಕೆಡಿಸಿದ ತ್ಯಾಜ್ಯ

>

ಬಿ.ರಾಘವೇಂದ್ರ ಪೈ, ಗಂಗೊಳ್ಳಿ
ಪಂಚ ನದಿಗಳ ಸಂಗಮ ತಾಣ ಗಂಗೊಳ್ಳಿ ಸುಂದರ ಸಮುದ್ರ ತೀರ ತ್ಯಾಜ್ಯ ವಿಸರ್ಜನೆ ಕೇಂದ್ರವಾಗಿ ಮಾರ್ಪಡುತ್ತಿದ್ದು, ಪ್ರವಾಸಿಗರು ಹಾಗೂ ವಾಯುವಿಹಾರಕ್ಕೆ ಬರುವವರು ತೊಂದರೆ ಅನುಭವಿಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವೆಂದು ಗುರುತಿಸಲ್ಪಡುವ ಗಂಗೊಳ್ಳಿ ಸಮುದ್ರ ತೀರ ಅಭಿವೃದ್ಧಿಯ ಭಾಗ್ಯ ಕಂಡಿಲ್ಲ. ತ್ರಾಸಿ-ಮರವಂತೆ ಕಡಲ ಕಿನಾರೆ ಪ್ರದೇಶ ಹೊರತುಪಡಿಸಿದರೆ ಈ ಭಾಗದ ಯಾವುದೇ ಕಡಲ ಕಿನಾರೆ ಪ್ರದೇಶಗಳು ಅಭಿವೃದ್ಧಿ ಹೊಂದಿಲ್ಲ. ಐದು ನದಿಗಳು ಒಟ್ಟು ಸೇರಿ ಸಮುದ್ರ ಸೇರುವ ಅದ್ಭುತ ದೃಶ್ಯ ಇಲ್ಲಿ ಕಾಣಬಹುದು. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ ಇವೆರಡನ್ನೂ ಒಂದೇ ಕಡೆ ನೋಡಬಹುದಾದ ಸ್ಥಳ ಗಂಗೊಳ್ಳಿ. ಇನ್ನೊಂದೆಡೆ ಮೀನುಗಾರಿಕಾ ಬಂದರು, ಹಳೇ ಲೈಟ್‌ಹೌಸ್ ಸೇರಿದಂತೆ ಸುಮಾರು 450 ವರ್ಷಕ್ಕೂ ಪುರಾತನವಾದ ದೇವಸ್ಥಾನಗಳು, ಶಿಲಾಶಾಸನಗಳು ಇಲ್ಲಿವೆ.
ಆದರೆ ಕಡಲ ತೀರಕ್ಕೆ ಹೋಗುವ ದಾರಿಯುದ್ದಕ್ಕೂ ತಾಜ್ಯಗಳ ರಾಶಿ ಕಂಡು ಬರುತ್ತಿದೆ. ಪ್ರವಾಸಿಗರನ್ನು ಹಾಗೂ ಪ್ರತಿನಿತ್ಯ ವಿಹಾರಕ್ಕೆಂದು ಬರುವ ಜನರನ್ನು ಈ ಪರಿಸರದ ಗಬ್ಬು ವಾಸನೆ ಸ್ವಾಗತಿಸುತ್ತಿದೆ. ತ್ಯಾಜ್ಯ ವಿಲೇವಾರಿಗೆ ಎಸ್‌ಎಲ್‌ಆರ್‌ಎಂ ಘಟಕ ಕಾರ್ಯನಿರ್ವಹಿಸುತ್ತಿದ್ದರೂ ಕೆಲವರು ತಮ್ಮ ಮನೆ ಹಾಗೂ ವಾಣಿಜ್ಯ ಮಳಿಗೆಗಳ ತ್ಯಾಜ್ಯವನ್ನು ಕಡಲ ತೀರದಲ್ಲೇ ಎಸೆಯುತ್ತಿದ್ದಾರೆ. ಮನೆಯ ಹಳೇ ಸಾಮಗ್ರಿಗಳು, ಹಾಳಾದ ಟಿವಿ, ಫ್ರಿಡ್ಜ್ ಮೊದಲಾದ ಉಪಕರಣಗಳನ್ನು ಕೂಡ ಕಡಲ ತೀರದಲ್ಲಿ ಎಸೆಯುತ್ತಿದ್ದಾರೆ.

ಅಂಕುಶ ಹಾಕುವುದು ಯಾವಾಗ?:  ಗಂಗೊಳ್ಳಿ ಕಡಲ ತೀರ ತ್ಯಾಜ್ಯ ವಿಸರ್ಜನೆ ಕೇಂದ್ರವಾಗಿ ಮಾರ್ಪಡುತ್ತಿರುವುದನ್ನು ಸ್ಥಳೀಯಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಡಲ ತೀರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರಿಗೆ ವರದಾನವಾಗುತ್ತಿದೆ. ಇಲ್ಲಿ ತ್ಯಾಜ್ಯ ವಿಸರ್ಜನೆಗೆ ಅಂಕುಶ ಹಾಕದಿದ್ದಲ್ಲಿ ಮತ್ತೊಂದು ಬೀಡಿನಗುಡ್ಡೆ ಆಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಪಂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಿಂದ ಜನ ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಲಾಗಿದೆ. ಆದರೆ ತ್ಯಾಜ್ಯ ವಿಸರ್ಜನೆ ಕಡಿಮೆಯಾಗಿಲ್ಲ. ಪರಿಸರದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸ್ಥಳೀಯಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.
ಜಾನ್ಸನ್, ಸ್ಥಳೀಯ ನಿವಾಸಿ

ಗಂಗೊಳ್ಳಿಯನ್ನು ಪ್ರವಾಸೋದ್ಯಮ ತಾಣವಾಗಿ ಗುರುತಿಸಿ ಅಭಿವೃದ್ಧಿಪಡಿಸಿದರೆ ತ್ಯಾಜ್ಯ ವಿಲೇವಾರಿಗೆ ಬ್ರೇಕ್ ಬೀಳಲಿದೆ. ತ್ಯಾಜ್ಯ ಎಸೆಯುವವರನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಬೇಕು. ಗಂಗೊಳ್ಳಿ ಬೀಚ್‌ನಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು. ಸ್ಥಳೀಯಾಡಳಿತ ಬೀಚ್‌ನಲ್ಲಿ ಎಸೆಯಲಾಗಿರುವ ತ್ಯಾಜ್ಯ ವಿಲೇವಾರಿ ಮಾಡಬೇಕು.
ಮಹೇಶ ಖಾರ್ವಿ, ಸ್ಥಳೀಯ ನಿವಾಸಿ

ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ವಿಸರ್ಜನೆಗೆ ಸಂಬಂಧಪಟ್ಟಂತೆ ಅನೇಕ ಬಾರಿ ಸ್ಥಳೀಯರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದೆ. ಆದರೂ ತ್ಯಾಜ್ಯ ವಿಲೇವಾರಿ ಕಡಿಮೆಯಾಗಿಲ್ಲ. ಸಂಬಂಧಪಟ್ಟ ಇಲಾಖಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಬೀಚ್ ವಠಾರದಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಬಿ.ಮಾಧವ, ಕಾರ್ಯದರ್ಶಿ, ಗಂಗೊಳ್ಳಿ ಗ್ರಾಪಂ