ಗಂಗಾವತಿ: ಹೆಚ್ಚಿನ ಇಳುವರಿಗೆ ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದ್ದು, ಯಾಂತ್ರೀಕೃತ ಬೇಸಾಯದತ್ತ ಗಮನಹರಿಸಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಹೇಳಿದರು.
ತಾಲೂಕಿನ ಹಣವಾಳದ ಭತ್ತದ ಗದ್ದೆಯಲ್ಲಿ ಕೃಷಿ ಇಲಾಖೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಪ್ರಧಾನ ದೇಶದಲ್ಲಿ ರೈತರು ಆಧುನಿಕ ಬೇಸಾಯ ಪದ್ಧತಿಗೆ ಆದ್ಯತೆ ನೀಡಬೇಕಿದ್ದು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಯೋಜನೆಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭತ್ತದ ನಾಟಿ ಯಂತ್ರವನ್ನು ಸಂಸ್ಥೆ ರೈತರಿಗೆ ಒದಗಿಸುತ್ತಿದ್ದು, ಇದರಿಂದ ಖರ್ಚು ಮತ್ತು ಸಮಯ ಉಳಿಯುತ್ತದೆ ಎಂದರು.
ಮರಳಿ ಹೋಬಳಿ ರೈತ ಸಂಪರ್ಕ ಅಧಿಕಾರಿ ಅಶೋಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಕೃಷಿ ಕಾರ್ಮಿಕರು ಸಕಾಲಕ್ಕೆ ಸಿಗುತ್ತಿಲ್ಲ. ಯಂತ್ರ ಬಳಕೆ ಮೂಲಕ ಕೊರತೆ ನೀಗಿಸಿಕೊಳ್ಳಬೇಕಿದೆ. ಸಂಸ್ಥೆ ಸಹಕಾರ ನೀಡುತ್ತಿದ್ದು, ಯಂತ್ರಗಳ ಖರೀದಿಗೆ ಸರ್ಕಾರ ಅನುದಾನ ನೀಡಲಿದೆ ಎಂದರು. ಇದೇ ಸಂದರ್ಭದಲ್ಲಿ ಯಂತ್ರದ ಮೂಲಕ ಭತ್ತ ನಾಟಿಯ ಪ್ರಾತ್ಯಕ್ಷಿಕೆ ಕೈಗೊಳ್ಳಲಾಯಿತು.
ಹಣವಾಳ ಗ್ರಾಪಂ ಅಧ್ಯಕ್ಷೆ ವೆಂಕಮ್ಮ, ಪ್ರಗತಿಪರ ರೈತರಾದ ವಿರೂಪಾಕ್ಷಗೌಡ, ವೀರೇಶಪ್ಪ, ಸುಬ್ಬರಾವ್, ವಿರೂಪಾಕ್ಷಪ್ಪ, ಕೃಷಿ ಸಹಾಯಕಿ ವಿದ್ಯಾಶ್ರೀ, ಟ್ರಸ್ಟ್ ಕೃಷಿ ಮೇಲ್ವಿಚಾರಕರಾದ ಲೋಕೇಶ, ಮಂಜುನಾಥ, ಹನುಮಂತಪ್ಪ, ಶಿವರಾಜ್, ಸೇವಾಪ್ರತಿನಿಧಿಗಳು ಮತ್ತು ವಿವಿಧ ಭಾಗದ ರೈತರು ಭಾಗವಹಿಸಿದ್ದರು.