ಇಟ್ಟಿಗೆ ಭಟ್ಟಿಗಳ ತೆರವು ಕೈಬಿಡಲು ಶಾಸಕ ಪರಣ್ಣಗೆ ಮಾಲೀಕರ ಮನವಿ

ಅನಧಿಕೃತ ಭಟ್ಟಿಗಳ ತೆರವು ನಿರ್ಧಾರಕ್ಕೆ ಆತಂಕ

ಗಂಗಾವತಿ: ತಾಲೂಕಿನಲ್ಲಿರುವ ಇಟ್ಟಿಗೆ ಭಟ್ಟಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಇಟ್ಟಿಗೆ ಭಟ್ಟಿ ಮಾಲೀಕರು ಸೋಮವಾರ ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಸಲ್ಲಿಸಿದರು.

ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ವೆಂಕಟಗಿರಿ, ದಾಸನಾಳ್, ಹಿರೇಬೆಣಕಲ್, ಬಸಾಪಟ್ಟಣ, ಚಿಕ್ಕಬೆಣಕಲ್, ಲಿಂಗದಹಳ್ಳಿ, ಬಂಡ್ರಾಳ್, ಗಡ್ಡಿಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಇಟ್ಟಿಗೆ ಭಟ್ಟಿಗಳ ತೆರವಿಗೆ ಜಿಲ್ಲಾಡಳಿತ ನಿರ್ಧರಿಸಿದ್ದು, ಇತ್ತೀಚಿಗೆ ಗಣಿ ಮತ್ತು ಭೂವಿಜ್ಞಾನ, ಕಂದಾಯ, ಪೊಲೀಸ್ ಮತ್ತು ತಾಪಂ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ತೆರವು ಭೀತಿ ಎದುರಿಸುತ್ತಿರುವ ಇಟ್ಟಿಗೆ ಭಟ್ಟಿ ಮಾಲೀಕರು ಶಾಸಕರ ಗೃಹ ಕಚೇರಿಗೆ ತೆರಳಿ, ಜೀವನ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ನೇತೃತ್ವ ವಹಿಸಿದ್ದ ಮಾಲೀಕ ಬಸವನಗೌಡ ಮಾತನಾಡಿ, ಮೂರು ದಶಕಗಳಿಂದ ಇಟ್ಟಿಗೆ ಭಟ್ಟಿ ನಡೆಸುತ್ತ ಬಂದಿದ್ದೇವೆ. ಕೆಲವರು ಸ್ವಂತದ್ದು, ಇನ್ನೂ ಕೆಲವರು ಬಾಡಿಗೆ ಪಡೆದು ಭಟ್ಟಿ ನಡೆಸುತ್ತಿದ್ದಾರೆ. ಇದು ಕೃಷಿ ಜತೆಗೆ ಉಪ ಉದ್ಯೋಗವಾಗಿದ್ದು, ಸಾವಿರಾರು ಕಾರ್ಮಿಕರಿಗೆ ವರದಾನವಾಗಿವೆ. ಇತ್ತೀಚಿಗೆ ತಾಲೂಕು ಆಡಳಿತ ಭಟ್ಟಿಗಳ ತೆರವಿಗೆ ಮುಂದಾಗಿದೆ. ಕಾನೂನು ರೀತ್ಯಾ ಪರವಾನಗಿ ಪಡೆದು ಇಟ್ಟಿಗೆ ಭಟ್ಟಿ ನಡೆಸಲು ಸಿದ್ಧರಿದ್ದೇವೆ. ಭಟ್ಟಿ ತೆರವುಗೊಳಿಸಿದರೆ ಸಣ್ಣ ರೈತರು ಮತ್ತು ಕಾರ್ಮಿಕರಿಗೆ ಸಂಕಷ್ಟ ಎದುರಾಗಲಿದೆ. ಆದ್ದರಿಂದ ಶಾಸಕರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಶಂಕ್ರಪ್ಪ, ಕಂಬಳಿ ಲಿಂಗಪ್ಪ, ಬಸವನಗೌಡ, ದೊಡ್ಡಬಸಪ್ಪ ಗಂಜಿ, ಈರಣ್ಣ ಬನ್ನಿಗೋಳ, ಮಲ್ಲಪ್ಪ ಬಾಳೀಕಾಯಿ, ಕಳಕಪ್ಪ ರಾಂಪುರ, ಮಹೆಬೂಬ್, ಕಾಸೀಂಸಾಬ್ ಖಾತರಕೀ ಇತರರು ಇದ್ದರು.

ಕಾನೂನು ವ್ಯಾಪ್ತಿಯಲ್ಲಿ ಭಟ್ಟಿ ಮುಂದುವರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಅಗತ್ಯ ಬಿದ್ದರೆ ಸರ್ಕಾರದ ಗಮನಕ್ಕೂ ತರುತ್ತೇನೆ. ಕಾಯ್ದೆಯನ್ವಯ ನಡೆಸಲು ಕಾಲವಕಾಶ ನೀಡಬೇಕಿದ್ದು, ಇಟ್ಟಿಗೆ ಭಟ್ಟಿ ಮಾಲೀಕರಿಗೆ ಅಧಿಕಾರಿಗಳು ತೊಂದರೆ ನೀಡಬಾರದು.
| ಪರಣ್ಣ ಮುನವಳ್ಳಿ ಗಂಗಾವತಿ ಶಾಸಕ

Leave a Reply

Your email address will not be published. Required fields are marked *