ಗಂಗಾವತಿ: ಭತ್ತ ಬೆಳೆಗಾರರ ಅನುಕೂಲಕ್ಕಾಗಿ ಎಡದಂಡೆ ಕಾಲುವೆಗೆ ಏ.20ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಏ.8ರಂದು ಗಂಗಾವತಿ ಮತ್ತು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಕೇಸರಹಟ್ಟಿ ಶರಣೇಗೌಡ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ನೀರಾವರಿ ಸಲಹಾ ಸಮಿತಿ ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಭೆಯ ಉದ್ದೇಶ ಕಾರ್ಖಾನೆಗಳಿಗೆ ಅನುಕೂಲ ಮಾಡಿಕೊಡುವುದಾಗಿತ್ತು. ಜಲಾಶಯದ ನೀರನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾರಿಕೊಳ್ಳುವ ಹುನ್ನಾರ ನಡೆಸಿದ್ದು, ವೈಯಕ್ತಿಕ ಹಿತಾಸಕ್ತಿಗೆ ರೈತರನ್ನು ಕಡೆಗಣಿಸುತ್ತಿದ್ದಾರೆ. ಈ ಹಿಂದೆ ಏ.25ರವರೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದಾಗ ಒಪ್ಪಿಕೊಂಡಿದ್ದ ಸಚಿವರು, ಸಭೆ ಮೂಲಕ ಏ.10ರವರೆಗೆ ಮಾತ್ರ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದು ಖಂಡನೀಯ ಎಂದರು.
ಸರ್ಕಾರದ ನಿರ್ಧಾರ ಖಂಡಿಸಿ ಏ.8ರಂದು ಗಂಗಾವತಿ ಮತ್ತು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದ್ದು, ಏ.9ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನೆಗೆ ಮುತ್ತಿಗೆ ಹಾಕಲಾಗುವುದು. ಬಂದ್‌ಗೆ ರೈತ, ಕಾರ್ಮಿಕ, ಕನ್ನಡ ಪರ ಸೇರಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.
ಕಿಸಾನ್ ಸಭಾ ಕೊಪ್ಪಳ ಜಿಲ್ಲಾಧ್ಯಕ್ಷ ಎ.ಹುಲುಗಪ್ಪ, ವರ್ತಕರ ಸಂಘದ ಪ್ರತಿನಿಧಿ ಶಿವಪ್ಪ ಗಾಳಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಎ.ಎಲ್.ತಿಮ್ಮಣ್ಣ, ಚನ್ನಬಸವ ಜೇಕಿನ್, ಸೋಮನಾಥ ಕಂಪ್ಲಿ ಇತರರಿದ್ದರು.