ಗಂಗಾವತಿ: ನಗರದ ಆರಾಧ್ಯದೈವ ಶ್ರೀ ಚನ್ನಬಸವ ಶಿವಯೋಗಿಗಳ 79ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಸರ್ವಾಲಂಕೃತ ಜೋಡು ರಥೋತ್ಸವ ಶನಿವಾರ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.
ತಿಂಗಳು ಮುಂಚೆ ಮಠದಲ್ಲಿ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಪುಣ್ಯಸ್ಮರಣೋತ್ಸವ ನಿಮಿತ್ತ ಕರ್ತೃ ಗದ್ದುಗೆ ಮತ್ತು ಶಿಲಾಮೂರ್ತಿಗೆ ವಿಶೇಷ ಪೂಜೆ, ಪುರಾಣ ಮಂಗಲ, ರುದ್ರಾಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ನೆರವೇರಿದ್ದು, ಬೆಳಗ್ಗೆ ಮಡಿತೇರು ಏಳೆಯಲಾಯಿತು.
ಪುರಾಣ ಪ್ರವಚನ ಮಹಾಮಂಗಲ ಜರುಗಿದ್ದು, ಪುರಾಣ ಪ್ರವಚನಕಾರರು, ಕಲಾವಿದರು ಮತ್ತು ಕೋಚಿಂಗ್ ಸೆಂಟರ್‌ನಲ್ಲಿ ಉಚಿತ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾರ್ಚಾರು ಆಶೀರ್ವಚನ ನೀಡಿದರು. ಸಂಜೆ ಸರ್ವಾಲಂಕೃತ ಜೋಡು ರಥೋತ್ಸವ ಶ್ರೀಮಠದಿಂದ ಬಸವಣ್ಣ ವೃತ್ತದ ಬಳಿಯ ಪಾದಗಟ್ಟೆವರೆಗೆ ಸಾಗುವ ಮೂಲಕ ಜಾತ್ರಾಮಹೋತ್ಸವಕ್ಕೆ ತೆರೆ ಬಿದ್ದಿತು.

ಜನನಾಯಕರ ಭೇಟಿ
ಸಿಬಿಎಸ್ ಕಲ್ಯಾಣ ಮಂಟಪ ಮತ್ತು ಆವರಣದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, 20 ಕೌಂಟರ್ ತೆರೆಯಲಾಗಿತ್ತು. ಬೂಂದಿ, ಮೈಸೂರು ಪಾಕ್, ಬದನೆಕಾಯಿ ಪಲ್ಯ, ಹಿಟ್ಟಿನ ಜುಣುಕ, ಅನ್ನ, ಸಾಂಬಾರ್ ವಿತರಿಸಲಾಯಿತು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಕೆಲಕಾಲ ನೂಕುನುಗ್ಗಲುಂಟಾಯಿತು.
ದೇವಾಲಯಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿ ಟ್ರಸ್ಟಿಗಳಾದ ಹೊಸಳ್ಳಿ ಶಂಕರಗೌಡ, ಸಿದ್ದನಗೌಡ, ಕೆ.ಚನ್ನಬಸಯ್ಯಸ್ವಾಮಿ, ಎಚ್.ಎಂ. ಸಿದ್ರಾಮಯ್ಯಸ್ವಾಮಿ, ಅಕ್ಕಿ ಕೊಟ್ರಪ್ಪ, ಬರಗೂರು ನಾಗರಾಜ್, ಅಕ್ಕಿ ಆನಂದ, ಚಂದ್ರೇಗೌಡ ಪೊ.ಪಾಟೀಲ್ ಭಾಗವಹಿಸಿದ್ದರು.
ಶಿಲಾಮೂರ್ತಿ ದರ್ಶನಕ್ಕೆ ನೂಕುನುಗ್ಗಲು
ಶ್ರೀಮಠಕ್ಕೆ ಕಾರಟಗಿ, ಕನಕಗಿರಿ, ಹಣವಾಳ, ಮುಕ್ಕಂಪಿ, ಗೊರೇಬಾಳ್, ಆನೆಗೊಂದಿ, ಹೇಮಗುಡ್ಡ ಸೇರಿ ವಿವಿಧ ಭಾಗದಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದು, ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು. ಶಿಲಾಮೂರ್ತಿ ದರ್ಶನಕ್ಕಾಗಿ ಜನರು ಸರದಿ ಸಾಲಿನಲ್ಲಿ ನಿಂತಿದ್ದು, ಜನಜಂಗುಳಿ ಹೆಚ್ಚಿದ್ದರಿಂದ ಕರ್ತೃ ಗದ್ದುಗೆ ದರ್ಶನ ನಿರ್ಬಂಧಿಸಲಾಯಿತು.