ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನಾಂದೋಲನ ರೂಪಿಸಬೇಕಿದೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನದ ತಾಲೂಕು ಸಂಚಾಲಕ ಡಾ. ಶಿವಕುಮಾರ ಮಾಲಿ ಪಾಟೀಲ್ ಹೇಳಿದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್‌ನಿಂದ ತಾಲೂಕಿನ ಶ್ರೀರಾಮನಗರದಲ್ಲಿ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನದ ಜಲಜಾಗೃತಿ ವಾಹನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ವಿವಿಧ ಕಾರಣಗಳಿಂದ ತುಂಗಭದ್ರಾ ನದಿ ಕಲುಷಿತಗೊಳ್ಳುತ್ತಿದ್ದು, ಕಾರ್ಖಾನೆ ಸೇರಿ ಇತರ ಗ್ರಾಮದ ತ್ಯಾಜ್ಯಗಳು ನದಿಗೆ ಸೇರುತ್ತಿವೆ. ಇದರಿಂದ ನೀರು ಮಲಿನವಾಗುತ್ತಿದ್ದು, ಕುಡಿಯಲು ಮತ್ತು ಕೃಷಿ ಚಟುವಟಿಕೆ ಬಳಸಲು ಯೋಗ್ಯವಿಲ್ಲ. ಜಲಜಾಗೃತಿ ರಥೋತ್ಸವ ಮೂಲಕ ಜನರನ್ನು ಎಚ್ಚರಗೊಳಿಸಲಾಗುತ್ತಿದ್ದು, ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಗ್ರಾಮ ಪ್ರವೇಶಿಸಿದ ಜಾಗೃತಿ ವಾಹನವನ್ನು ಗ್ರಾಪಂನಿಂದ ಸ್ವಾಗತಿಸಲಾಯಿತು. ನಂತರ ಸಾರ್ವಜನಿಕರಿಗೆ ಜಲಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮುಖಂಡರಾದ ಚಿಲಕೂರಿ ರಾಮಕೃಷ್ಣ, ಭಾಸ್ಕರ್ ರೆಡ್ಡಿ, ರಮೇಶ ಕುಲ್ಕರ್ಣಿ, ಜಿ.ರಾಮಕೃಷ್ಣ, ತಾಯಪ್ಪ, ಯಲ್ಲಪ್ಪ, ಸುಬ್ರಹ್ಮಣೇಶ್ವರರಾವ್, ಸುಮಂಗಲಾ, ಬಾಲಕೃಷ್ಣ ನಾಯ್ಡು ಇತರರಿದ್ದರು.