ಕೈ ನಾಯಕರು ನಾಪತ್ತೆ, ಶಾಸಕ ವ್ಯಂಗ್ಯ

ಗಾಂಧಿ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ

ಗಂಗಾವತಿ (ಕೊಪ್ಪಳ): ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸೆಸ್ ಹಾಕುವ ಮೂಲಕ ದರ ಏರಿಸಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ವಿವಿಧ ಮೋರ್ಚಾ ಕಾರ್ಯಕರ್ತರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿ ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಸಲ್ಲಿಸಲಾಯಿತು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಇಂಧನ ಬೆಲೆ ಹೆಚ್ಚಾದಾಗ ಕೇಂದ್ರ ಸರ್ಕಾರದ ವಿರುದ್ಧ ದೂರುತ್ತಿದ್ದ ಕಾಂಗ್ರೆಸ್ ಮುಖಂಡರು, ಸಮಿಶ್ರ ಸರ್ಕಾರದಲ್ಲಿ ಬೆಲೆ ಹೆಚ್ಚಿಸಿದರೂ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿಟ್ಟುಕೊಂಡು ಪ್ರತಿಭ ಟಿಸುವ ರಾಹುಲ್ ಗಾಂಧಿ ಮತ್ತು ಕೈ ಪಡೆ ನಾಯಕರು ನಾಪತ್ತೆಯಾಗಿದ್ದು, ಸಿಎಂ ಕುಮಾರಸ್ವಾಮಿರಿ ಆಡಳಿತ ನಡೆಸುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಸಮಿಶ್ರ ಸರ್ಕಾರ ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದು, ವಿಧಾನಸೌಧದಲ್ಲಿ ಹಣ ಪಡೆದ ಪ್ರಕರಣ ಪತ್ತೆಯಾಗಿರುವುದು ಅವ್ಯವಹಾರಕ್ಕೆ ಸಾಕ್ಷಿ. ನಾಲ್ಕುವರೆ ವರ್ಷಗಳಲ್ಲಿ ಹಗರಣಕ್ಕೆ ಅವಕಾಶ ನೀಡದೆ ಪಾರದರ್ಶಕ ಆಡಳಿತ ನೀಡಿದ ಪಿಎಂ ಮೋದಿ ಸರ್ಕಾರ ಟೀಕಿಸುವ ನೈತಿಕತೆ ಸಮಿಶ್ರ ಸರ್ಕಾರ ಕಳೆದುಕೊಂಡಿದೆ ಎಂದರು.

ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ್, ವಾಸುನವಲಿ, ಪರಶುರಾಂಮಡ್ಡೇರ್, ರಮೇಶ ಚೌಡ್ಕಿ, ಮಾಜಿ ಸದಸ್ಯ ರಾಮಚಂದ್ರಪ್ಪ, ಬಿಜೆಪಿ ಮುಖಂಡರಾ ವೀರೇಶ ಬಲ್ಕುಂದಿ, ರಾಜೇಶ್ವರಿ ಸುರೇಶ, ಶಿವುಆದೋನಿ, ಕಾಶೀನಾಥ ಚಿತ್ರಗಾರ, ಡಿ.ಎಂ.ಸುರೇಶ, ಬಸಪ್ಪ ನಾಯಕ, ಚಂದ್ರು ಉಪ್ಪಾರ, ಪ್ರಕಾಶ ಅಕ್ಕಿ, ಸುದರ್ಶನ ತಾಂದಳೆ ಇತರರಿದ್ದರು.