ಗಂಗಾವತಿ: ನಗರದ 28ನೇ ವಾರ್ಡ್ ಕೆಕೆಆರ್‌ಟಿಸಿ ಡಿಪೋ ಏರಿಯಾದ ಮನೆಯೊಂದರಲ್ಲಿ ಸೋಮವಾರ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ತೀವ್ರ ಗಾಯವಾಗಿದ್ದು, ಮನೆಯ ವಸ್ತುಗಳ ಸುಟ್ಟುಹೋಗಿವೆ.
ಮನೆಯ ಮಾಲೀಕರಾದ ಶ್ರುತಿ ಐಲಿ ಹಾಗೂ ಪಕ್ಕದ ಮನೆಯ ಭಾಗ್ಯಮ್ಮ, ಕವಿತಾ, ಶೋಭಾ, ಪ್ರೀತಿ ಇವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೀಜರ್‌ಗೂ ಸಂಪರ್ಕ ಹೊಂದಿರುವ ಸಿಲಿಂಡರ್‌ನಲ್ಲಿ ಸೋರಿಕೆ ಉಂಟಾದ ವೇಳೆಯೇ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಆಗಿದ್ದರಿಂದ ಬೆಂಕಿಯ ಪ್ರಮಾಣ ತೀವ್ರಗೊಂಡಿದೆ. ಮನೆಯ ಮಾಲೀಕರಾದ ಶ್ರುತಿ ಐಲಿ, ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಅಕ್ಕಪಕ್ಕದ ಮಹಿಳೆಯರು ನೆರವಿಗೆ ಧಾವಿಸಿದಾಗ ಅವರಿಗೂ ಬೆಂಕಿ ಅವರಿಸಿದ್ದರಿಂದ ಸುಟ್ಟ ಗಾಯಗಳಾಗಿವೆ.
ಮನೆಯಲ್ಲಿದ್ದ ಬಟ್ಟೆ, ದವಸ-ಧಾನ್ಯ, ಪಿಠೋಪಕರಣಗಳು ಹಾನಿಯಾಗಿದ್ದು, ಇವುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ ಮತ್ತು ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.