ಗಂಗಾವತಿ: ಮಹಿಳೆಯರ ರಕ್ಷಣಾ ಕಾನೂನಿನ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದ್ದು, ಮಹಿಳಾ ಹಕ್ಕುಗಳನ್ನು ಪಡೆಯಲು ಕಾನೂನು ಸಹಕಾರಿಯಾಗಿದೆ ಎಂದು ಕನ್ನಡ ವಿವಿ ಸೆನೆಟ್ ಮಾಜಿ ಸದಸ್ಯೆ ಮತ್ತು ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಸುರೇಶ ಹೇಳಿದರು.
ತಾಲೂಕಿನ ಬಸಾಪಟ್ಟಣದ ನೇತ್ರಾವತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರದ ವಾರ್ಷಿಕೋತ್ಸವ ಮತ್ತು ವಿವಿಧ ಸ್ಪರ್ಧಾ ಕಾಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಸ್ವಾವಲಂಬಿಯಾಗುವುದರ ಜತೆಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಕಾನೂನು ಅರಿವು ಮೂಲಕ ಉನ್ನತ ಸಾಧನೆಯತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದರು. ಯೋಜನೆ ಉದ್ದೇಶ, ಕ್ರೀಯಾಶೀಲ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ನಂತರ ಮಹಿಳೆಯರಿಗೆ ಆಯೋಜಿಸಿದ್ದ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಆಂಜನೇಯ, ಸದಸ್ಯ ಶ್ರೀಕಾಂತ, ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಧ್ಯಕ್ಷ ಸಣ್ಣೆಯ್ಯ, ಕೇಂದ್ರದ ಅಧ್ಯಕ್ಷೆ ಮಾಬಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾರದಾ, ವಲಯ ಮೇಲ್ವಿಚಾರ ಎಸ್.ಬಿ. ವಿಠಲ್, ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರಿದ್ದರು.