ಗಂಗಾವತಿ: ತಾಲೂಕಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 120 ಕೋಟಿ ರೂ. ಮತ್ತು ಕೇಂದ್ರ ಸರ್ಕಾರದಿಂದ 100 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿಗಳ ಕ್ರಿಯಾಯೋಜನೆಗಾಗಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿಗದಿಗಿಂತ ಒಂದು ಗಂಟೆ ತಡವಾಗಿ ಆನೆಗೊಂದಿ ಉತ್ಸವ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದ ಸಿಎಂ ಮತ್ತು ಇತರ ಸಚಿವರು, ಕಾರು ಮೂಲಕ ಅಂಜನಾದ್ರಿ ಬೆಟ್ಟಕ್ಕೆ ತೆರಳಿದರು. ಸಮಗ್ರ ಅಭಿವೃದ್ಧಿ ಮತ್ತು ಯೋಜನೆಗಳ ಬಗ್ಗೆ ಶಾಸಕ ಪರಣ್ಣ ಮುನವಳ್ಳಿ ಮಾಹಿತಿ ನೀಡಿದರು. ಹೆಲಿಪ್ಯಾಡ್‌ನಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಆದರೂ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದರಿಂದ ಆಪ್ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ವಾಲಿಕಿಲ್ಲಾ ಮ್ಯಾಗೋಟಕ್ಕೆ ಭೇಟಿ: ಅಂಜನಾದ್ರಿ ಬೆಟ್ಟದ ನಂತರ ಆನೆಗೊಂದಿ ಬಳಿ ವಾಲಿ ಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯಕ್ಕೆ ತೆರಳಿದ ಸಿಎಂ, ಗೋಶಾಲೆ ವೀಕ್ಷಿಸಿದರು. ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆಹಾರ ನೀಡಿ, ಮುತ್ತಿಕ್ಕಿದರು. ದೇವಾಲಯ ಸಮಿತಿ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿ ಮನವಿಯಂತೆ ಮೇವಿಗಾಗಿ ಜಾಗ ನೀಡಲು ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರಲ್ಲದೇ, ಪುಣ್ಯಕೋಟಿ ಯೋಜನೆಯಡಿ ಅಗತ್ಯ ನೆರವು ನೀಡುವ ಭರವಸೆ ನೀಡಿದರು.
ಸಿಎಂ ಭೇಟಿ ಹಿನ್ನೆಲೆಯಲ್ಲಿ ಕಡೇಬಾಗಿಲಿನಿಂದ ಅಂಜನಾದ್ರಿ ಬೆಟ್ಟದವರೆಗಿನ ಸಂಚಾರ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಸಂಚಾರಿಗಳು ಮತ್ತು ಪ್ರವಾಸಿಗರು ಪರದಾಡಿದರು. ಸಿಎಂ ವೀಕ್ಷಣೆಗಾಗಿ ಜನ ಬೆಟ್ಟ ಮತ್ತು ಮರದ ಮೇಲೆ ಹತ್ತಿದ್ದು, ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಅಧಿಕಾರಿಗಳ ಸಭೆಗಾಗಿ ಪ್ರತ್ಯೇಕ ಶೆಡ್ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತ, ಮಾಧ್ಯಮದವರಿಗೆ ನಿರಾಕರಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಕುಡಿಯುವ ನೀರಿಗೂ ಪರದಾಡಿದ್ದು, ಗಂಟೆಗಟ್ಟಲೆ ನಿಂತುಕೊಂಡೇ ಸುದ್ದಿಗೋಷ್ಠಿ ನಡೆಸಬೇಕಾಯಿತು. ಅಧಿಕಾರಿಗಳಿಗಾಗಿ ಭಕ್ಷೃಗಳ ವ್ಯವಸ್ಥೆ ಮಾಡಿದ್ದು, ಯೂಸ್ ಆ್ಯಂಡ್ ಥ್ರೋ ತಟ್ಟೆ ಬಳಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಎಲ್ಲೆಂದರಲ್ಲಿ ಪೊಲೀಸರದ್ದೇ ಸದ್ದಾಗಿದ್ದು, ಪ್ರವಾಸಿಗರು ಹಿಡಿಶಾಪ ಹಾಕುತ್ತಲೇ ಕಾಯ್ದಿದ್ದು ಕಂಡುಬಂತು.

