ಸಿಲಿಂಡರ್ ವಿತರಣೆ ಸಿಬ್ಬಂದಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಆಗ್ರಹ


ಗಂಗಾವತಿ: ಸಿಲಿಂಡರ್ ವಿತರಣೆ ಸಿಬ್ಬಂದಿಗೆ ಕಿರುಕುಳ ನೀಡುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದ ನೆಹರೂ ಪಾರ್ಕ್ ಮುಂಭಾಗ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರಿಯ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿತು.

ನಗರದ ಬಾಲಾಜಿ ಗ್ಯಾಸ್ ಕಂಪನಿಯ 55ವಿತರಣೆ ಸಿಬ್ಬಂದಿಯೊಂದಿಗೆ ಪ್ರತಿಭಟಿಸಿದ ಬಳಿಕ ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿದರು.

ನೇತೃತ್ವವಹಿಸಿದ್ದ ಸಮಿತಿ ಸಂ.ಕಾರ್ಯದರ್ಶಿ ಎಸ್.ಎಸ್.ಮಹೆಬೂಬ್ ಮಾತನಾಡಿ, ವಿತರಣೆ ಸಿಬ್ಬಂದಿಗೆ ಕೆಲವರು ವಿನಾಕರಣ ತೊಂದರೆ ನೀಡುತ್ತಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡದಿದ್ದರೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೂಲಸೌಕರ್ಯ ಒದಗಿಸುವ ನೆಪದಲ್ಲಿ ಕೆಲ ಸಂಘಟನೆಗಳು ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದು, ವಿಚಾರಿಸಿದವರನ್ನು ಇತ್ತೀಚೆಗೆ ಧರಣಿ ನಡೆಸಿದ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಹೆಚ್ಚುತ್ತಿರುವ ಅನಧಿಕೃತ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ತಾಯಪ್ಪ, ಗೌಸ್, ರಾಜಾವಲಿ, ರಾಘು, ಶೆಕ್ಷಾವಲಿ, ಮಾಣಿಕ್ಯ, ನವೀನ್, ಬಿ.ಮಂಜುನಾಥ ಮತ್ತಿತರರಿದ್ದರು.