ಗಂಗಾವತಿ: ಪ್ರಸಕ್ತ ಸಾಲಿನ ಗಣೇಶ ಹಬ್ಬಕ್ಕಾಗಿ ಪ್ರತಿಷ್ಠಾಪನೆ ಸಮಿತಿಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆ ಶುರುವಾಗಿದ್ದು, ಪೊಲೀಸರು ಹೈಅಲರ್ಟ್ ಆಗಿದ್ದಾರೆ.
ನಗರ ಮತ್ತು ಗ್ರಾಮೀಣ ಭಾಗದಲ್ಲಿ 300ಕ್ಕೂ ಹೆಚ್ಚು ಪ್ರತಿಷ್ಠಾಪನೆ ಸಮಿತಿಯವರು ಪರವಾನಗಿ ಪಡೆಯಲು ನಿರ್ಧರಿಸಿದ್ದು, ಒಂದೇ ದಿನದಲ್ಲಿ 120ಕ್ಕೂ ಹೆಚ್ಚು ಸಮಿತಿಯವರು ಅರ್ಜಿ ಸಲ್ಲಿಸಿದ್ದಾರೆ. ಸಮಿತಿ ಅನುಕೂಲಕ್ಕಾಗಿ ನಗರ ಠಾಣೆ ಆವರಣದಲ್ಲಿ ಏಕಗವಾಕ್ಷಿ ಪದ್ಧತಿ ಮೂಲಕ ಪರವಾನಗಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಮೂರ್ತಿ ಪ್ರತಿಷ್ಠಾಪನೆಗೆ 22 ಷರತ್ತುಗಳನ್ನು ಒಪ್ಪುವ ಸಮಿತಿಗೆ ಪರವಾನಗಿ ನೀಡಲಾಗುತ್ತಿದೆ. ಸ್ಥಳದಲ್ಲಿ ಪೊಲೀಸ್, ಅಗ್ನಿಶಾಮಕ, ಜೆಸ್ಕಾಂ, ನಗರಸಭೆ ಮತ್ತು ಕಂದಾಯ ಸಿಬ್ಬಂದಿಯಿಂದ ನಿರಪೇಕ್ಷಣಾ ಪಡೆಯುವುದು ಕಡ್ಡಾಯ. ಹೀಗಾಗಿ ಎಲ್ಲ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ತ್ವರಿತಗತಿಯಲ್ಲಿ ಪರವಾನಗಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ನಗರ ಪಿಐ ಪ್ರಕಾಶ ಎಲ್. ಮಾಳೆ ಮಾತನಾಡಿ, ಪ್ರತಿಷ್ಠಾಪನೆ ಸಮಿತಿಯವರು ಮುನ್ನೆಚ್ಚರಿಕೆ ಕ್ರಮ ಕಡ್ಡಾಯ ಪಾಲಿಸಬೇಕಿದ್ದು, ಪರವಾನಗಿ ಸಂದರ್ಭದಲ್ಲಿ ಇಲಾಖೆ ವಿಧಿಸುವ ಷರತ್ತುಗಳಿಗೆ ಬದ್ಧರಾಗಿರಬೇಕಿದೆ ಎಂದರು. ನಗರಸಭೆ ಪರಿಸರ ಇಂಜಿನಿಯರ್ ಚೇತನನಾಯ್ಕ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಜೆಸ್ಕಾಂ ಎಇಇ ಪ್ರವೀಣ, ಅಗ್ನಿಶಾಮಕ ದಳದ ಅಧಿಕಾರಿಗಳಾದ ಸುರೇಶ, ವೀರೇಶ ಇತರರಿದ್ದರು.
ಹೈಅಲರ್ಟ್: ನಗರವನ್ನು ಸೂಕ್ಷ್ಮ ಪ್ರದೇಶವೆಂದು ಜಿಲ್ಲಾಡಳಿತ ಗುರುತಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಅಧಿಕಾರಿಗಳೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶದ 35 ಸ್ಥಳಗಳಲ್ಲಿ 108 ಸಿಸಿ ಕ್ಯಾಮರಾ ಅಳವಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಎಸ್ಪಿ ಹೇಮಂತಕುಮಾರ ನೇತೃತ್ವದಲ್ಲಿ ಪೊಲೀಸರು ನಗರದಾದ್ಯಂತ ಸಂಚರಿಸಿ, ಕ್ಯಾಮರಾ ಅಳವಡಿಸುವ ಸ್ಥಳಗಳನ್ನು ಪರಿಶೀಲಿಸಿದರು. ನಗರ ಪಿಐ ಪ್ರಕಾಶ ಎಲ್.ಮಾಳೆ, ಪೇದೆ ಮಹೇಶ ಇತರರಿದ್ದರು.