ಗಂಗಾವತಿ: ಬೀಜೋಪಾಚಾರ ಮತ್ತು ಸುಧಾರಿತ ಬೇಸಾಯ ಕ್ರಮಗಳ ಮೂಲಕ ನಿರೀಕ್ಷಿತ ಇಳುವರಿ ಪಡೆಯಬೇಕಿದ್ದು, ಕೀಟ ನಿರ್ವಹಣೆ ಮುಖ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಹೇಳಿದರು.
ತಾಲೂಕಿನ ವೆಂಕಟಗಿರಿ ಜಮೀನಿನಲ್ಲಿ ರೈತ ಸಂಪರ್ಕ ಕೇಂದ್ರದಿಂದ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಶನಿವಾರ ಹಮ್ಮಿಕೊಂಡಿದ್ದ ನವಣೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಹಿಂಗಾರು ಹಂಗಾಮಿನ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಮೇಲೆ ಪರಿಣಾಮ ಬೀರಲಿದ್ದು, ಕೀಟಗಳ ಹಾವಳಿ ಹೆಚ್ಚಾಗಲಿದ್ದು, ಕೃಷಿ ತಜ್ಞರ ಸಲಹೆಯಂತೆ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಕೃಷಿ ಅಧಿಕಾರಿ ಎಸ್.ಜಿ.ಹರೀಶ್ ಮಾತನಾಡಿ, ನವಣೆ, ಸಜ್ಜೆ, ಶೇಂಗಾ, ಮೆಕ್ಕೆಜೋಳ ಕೃಷಿಯಲ್ಲಿ ಕೀಟಗಳ ಹಾವಳಿ ಹೆಚ್ಚಾಗಲಿದ್ದು, ನಿಯಂತ್ರಣಕ್ಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಭತ್ತದ ಬೆಳೆಯಲ್ಲಿ ಬರುವ ಕಣೆ ನೋಣ, ಕಡಲೆ ಬೆಳೆಗಳಲ್ಲಿನ ಸೊರಗು ರೋಗ ಮತ್ತು ಕಾಯಿಕೋರಕ ಕೀಟ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ಸಿರಿಧಾನ್ಯಗಳ ಕೃಷಿ ಮತ್ತು ಮೌಲ್ಯವರ್ಧನೆ ಕುರಿತು ಕೆವಿಕೆ ತಜ್ಞೆ ಡಾ.ಕವಿತಾ ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರದ ಸಹಾಯಕರಾದ ಗಣೇಶ, ಗಂಗಾಧರ, ಸರೋಜಾ, ಗಂಗಾಧರಯ್ಯ ಹಾಗೂ ವಿವಿಧ ಗ್ರಾಮದ ರೈತರಿದ್ದರು.